ಹೈದರಾಬಾದ್: ಕ್ರಿಕೆಟ್ ಚೆಂಡನ್ನು ಹುಡುಕುತ್ತಾ ಹೋದ ಬಾಲಕನಿಗೆ ಪಾಳು ಬಿದ್ದ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆಯಾದ ಬೆಚ್ಚಿಬೀಳಿಸುವ ಘಟನೆ ಹೈದರಾಬಾದ್‌ನ ನಾಂಪಲ್ಲಿಯಲ್ಲಿ ನಡೆದಿದೆ. ಈ ಅಸ್ಥಿಪಂಜರವು ಸುಮಾರು 10 ವರ್ಷಗಳ ಹಿಂದೆ ಸಾವನ್ನಪ್ಪಿದ್ದ ಅಮೀರ್ ಖಾನ್ ಎಂಬುವವರದ್ದು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ವಿಶೇಷವೆಂದರೆ, ಈ ಗುರುತು ಪತ್ತೆ ಹಚ್ಚಲು ದಶಕದ ಹಳೆಯ ನೋಕಿಯಾ ಫೋನ್ ಪೊಲೀಸರಿಗೆ ಪ್ರಮುಖ ಸಾಕ್ಷಿಯಾಗಿದೆ.
ಚೆಂಡು ಹುಡುಕಲು ಹೋದಾಗ ಬಯಲಾದ ರಹಸ್ಯ
ಸೋಮವಾರ ನಾಂಪಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಬಾಲಕನೊಬ್ಬ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಶಿಥಿಲಗೊಂಡ, ಬೀಗ ಹಾಕಿದ್ದ ಮನೆಯೊಳಗೆ ಬಿದ್ದಿದೆ. ಚೆಂಡನ್ನು ಹುಡುಕಲು ಒಳಹೋದ ಬಾಲಕನಿಗೆ ಅಡುಗೆ ಮನೆಯಲ್ಲಿ ಅಸ್ಥಿಪಂಜರ ಕಂಡಿದೆ. ಭಯಭೀತನಾದ ಬಾಲಕ ವಿಷಯ ತಿಳಿಸಿದ ಕೂಡಲೇ ಹಬೀಬ್‌ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಗುರುತು ಪತ್ತೆಗೆ ಸಹಾಯ ಮಾಡಿದ ನೋಕಿಯಾ ಫೋನ್!
ಅಸ್ಥಿಪಂಜರದ ಪಕ್ಕದಲ್ಲೇ ಸ್ವಿಚ್ ಆಫ್ ಆಗಿದ್ದ ಹಳೆಯ ನೋಕಿಯಾ ಫೋನ್ ಪತ್ತೆಯಾಗಿತ್ತು. ಪೊಲೀಸರು ಅದನ್ನು ಚಾರ್ಜ್ ಮಾಡಿ ಆನ್ ಮಾಡಿದಾಗ ಹಲವು ಮಾಹಿತಿಗಳು ಲಭ್ಯವಾಗಿವೆ:
2015ರಲ್ಲಿ ಈ ಫೋನ್‌ಗೆ ಬರೋಬ್ಬರಿ 84 ಮಿಸ್ಡ್ ಕಾಲ್‌ಗಳು ಬಂದಿವೆ. ಆ ನಂತರ ಯಾವುದೇ ಚಟುವಟಿಕೆ ನಡೆದಿಲ್ಲ. ಇದರಿಂದ ಅಮೀರ್ ಖಾನ್ 2015ರಲ್ಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಫೋನ್‌ನಲ್ಲಿದ್ದ ಮೆಸೇಜ್‌ಗಳು ಮೃತನ ಹೆಸರು ಮತ್ತು ವಿಳಾಸವನ್ನು ಖಚಿತಪಡಿಸಲು ಸಹಾಯ ಮಾಡಿವೆ.
ಒಂಟಿ ಜೀವನ, ಯಾರಿಗೂ ತಿಳಿಯದ ಸಾವು
ಮೃತ ಅಮೀರ್ ಖಾನ್ (ಸುಮಾರು 50 ವರ್ಷ) ಮುನೀರ್ ಖಾನ್ ಎಂಬುವವರ ಹತ್ತು ಮಕ್ಕಳಲ್ಲಿ ಮೂರನೇ ಮಗ. ಅವಿವಾಹಿತರಾಗಿದ್ದ ಇವರು 2015 ರಿಂದ ಈ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.ಅಮೀರ್ ಅವರ ಕುಟುಂಬ ಸದಸ್ಯರು ವರ್ಷಗಳ ಹಿಂದೆಯೇ ಬೇರೆಡೆಗೆ ಸ್ಥಳಾಂತರಗೊಂಡಿದ್ದರು ಮತ್ತು ಇವರೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಹೀಗಾಗಿ ಇವರು ಮೃತಪಟ್ಟ ವಿಚಾರ ಯಾರಿಗೂ ತಿಳಿದಿರಲಿಲ್ಲ. ಅಮೀರ್ ಖಾನ್ ಹಾಸಿಗೆಯ ದಿಂಬಿನ ಕೆಳಗೆ 2016ರಲ್ಲಿ ಸರ್ಕಾರ ರದ್ದುಗೊಳಿಸಿದ್ದ ಹಳೆಯ ನೋಟುಗಳು ಪತ್ತೆಯಾಗಿವೆ. ಮೃತರು ಮಾನಸಿಕವಾಗಿ ಸ್ವಲ್ಪ ಅಸ್ವಸ್ಥರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ಮುಂದುವರಿಕೆ
ಅಮೀರ್ ಖಾನ್ ಅವರ ಸಾವು ಸಹಜವಾಗಿಯೇ ಸಂಭವಿಸಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂದು ತಿಳಿಯಲು ಅಸ್ಥಿಪಂಜರವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯಕ್ಕೆ ಹಬೀಬ್‌ನಗರ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.