Skip to main content
ವಿಡಿಯೋ
crime

ವಿಜಯಪುರದಲ್ಲಿ ಪೊಲೀಸ್ ಹೈಡ್ರಾಮಾ: ಪಿಎಸ್‌ಐ ಭ್ರಷ್ಟಾಚಾರಕ್ಕೆ ಬೇಸತ್ತು ಸಾಮೂಹಿಕ 'ದಯಾಮರಣ' ಕೋರಿದ ಠಾಣೆ ಸಿಬ್ಬಂದಿ!

By Bhavana Gowda
ವಿಜಯಪುರದಲ್ಲಿ ಪೊಲೀಸ್ ಹೈಡ್ರಾಮಾ: ಪಿಎಸ್‌ಐ ಭ್ರಷ್ಟಾಚಾರಕ್ಕೆ ಬೇಸತ್ತು ಸಾಮೂಹಿಕ 'ದಯಾಮರಣ' ಕೋರಿದ ಠಾಣೆ ಸಿಬ್ಬಂದಿ!

ಠಾಣೆಗೆ ಬರುವ ದೂರುದಾರರಿಂದ ಹಾಗೂ ಎಫ್‌ಐಆರ್ ದಾಖಲಿಸಲು 10,000 ರೂ.ನಿಂದ 1 ಲಕ್ಷ ರೂ.ವರೆಗೆ ವಸೂಲಿ ಮಾಡಿಕೊಡುವಂತೆ ಸಿಬ್ಬಂದಿಗೆ ತಾಕೀತು ಮಾಡುತ್ತಿದ್ದಾರೆ.

ವಿಜಯಪುರ: ರಕ್ಷಕರೇ ಭಕ್ಷಕರಾದರೆ ಎಂಬ ಮಾತಿಗೆ ಅನ್ವರ್ಥ ಎಂಬಂತೆ, ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ತಮ್ಮದೇ ಠಾಣೆಯ ಪಿಎಸ್‌ಐ ನೀಡುತ್ತಿರುವ ಭ್ರಷ್ಟಾಚಾರದ ಕಿರುಕುಳ ಹಾಗೂ ಹಣ ವಸೂಲಿಯ ಒತ್ತಡಕ್ಕೆ ಮಣಿಯದ ಸಿಬ್ಬಂದಿಗಳು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು 'ಸಾಮೂಹಿಕ ದಯಾಮರಣ'ಕ್ಕೆ ಅನುಮತಿ ಕೋರಿದ್ದಾರೆ.

ವರ್ಗಾವಣೆಗಾಗಿ ಹಣದ ಬೇಟೆ?

ಠಾಣೆಯ ಪಿಎಸ್‌ಐ ಸೀತಾರಾಮ್ ಲಮಾಣಿ ವಿರುದ್ಧ ಸಿಬ್ಬಂದಿಗಳು ಗಂಭೀರ ಆರೋಪ ಮಾಡಿದ್ದಾರೆ. ಲಮಾಣಿ ಅವರು ತಮಗೆ ಬೇಕಾದ ತಿಕೋಟ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿಕೊಳ್ಳಲು ದೊಡ್ಡ ಮಟ್ಟದ ಹಣ ಹೊಂದಿಸುತ್ತಿದ್ದಾರೆ. ಇದಕ್ಕಾಗಿ ಠಾಣೆಯ ಸಿಬ್ಬಂದಿಗಳ ಮೇಲೆ ಹಣ ವಸೂಲಿ ಮಾಡುವಂತೆ ವಿಪರೀತ ಒತ್ತಡ ಹೇರುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

'ಕೋಡ್ ವರ್ಡ್' ಮೂಲಕ ವಸೂಲಿ ದಂಧೆ!

ಪಿಎಸ್‌ಐ ಲಮಾಣಿ ಅವರ ವಸೂಲಿ ದಂಧೆಯ ರೀತಿ ಕೇಳಿದರೆ ಸಾರ್ವಜನಿಕರು ಬೆಚ್ಚಿಬೀಳುವುದು ಗ್ಯಾರಂಟಿ. ಸಿಬ್ಬಂದಿಗಳು ಮಾಡಿರುವ ಆರೋಪಗಳ ಪಟ್ಟಿ ಹೀಗಿದೆ:

ವಸೂಲಿ ಕೋಡ್: ಹಣ ವಸೂಲಿಗೆ '5.0' (ಅಂದರೆ 50,000 ರೂ.) ಎಂಬ ವಿಶೇಷ ಕೋಡ್ ವರ್ಡ್‌ಗಳನ್ನು ಬಳಸಲಾಗುತ್ತಿದೆ.

ಎಫ್‌ಐಆರ್ ದರ: ಠಾಣೆಗೆ ಬರುವ ದೂರುದಾರರಿಂದ ಹಾಗೂ ಎಫ್‌ಐಆರ್ ದಾಖಲಿಸಲು 10,000 ರೂ.ನಿಂದ 1 ಲಕ್ಷ ರೂ.ವರೆಗೆ ವಸೂಲಿ ಮಾಡಿಕೊಡುವಂತೆ ಸಿಬ್ಬಂದಿಗೆ ತಾಕೀತು ಮಾಡುತ್ತಿದ್ದಾರೆ.

ಅಕ್ರಮ ದಂಧೆಗಳಿಗೆ ಸಾಥ್: ಬಾರ್, ಸ್ಪಾ, ಸಿಗರೇಟ್, ಮಾವಾ (ತಂಬಾಕು) ಮಾರಾಟಗಾರರು ಮತ್ತು ವೇಶ್ಯಾವಾಟಿಕೆ ದಂಧೆಕೋರರಿಂದ ಹಣ ವಸೂಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

ಹಿರಿಯ ಅಧಿಕಾರಿಗಳಿಗೆ ಪತ್ರ

ಪಿಎಸ್‌ಐ ಅವರ ಈ ಕಾನೂನು ಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರ ಮುಂದೆ ತಲೆ ಎತ್ತಿ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಕಿರುಕುಳ ಅನುಭವಿಸುವ ಬದಲು ಸಾಯುವುದೇ ಮೇಲು ಎಂದು ನೊಂದ ಸಿಬ್ಬಂದಿಗಳು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ದೂರು ನೀಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಇಲಾಖೆಯಲ್ಲೇ ಇಂತಹ ಘಟನೆ ನಡೆದಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.