Skip to main content
ವಿಡಿಯೋ
politics

ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ನಾಲ್ವಡಿ ಶೈಲಿಯ ಮೈಸೂರು ಪೇಟ ಧರಿಸಿ ಭೈರವೈಕ್ಯ ಮಂದಿರ ಲೋಕಾರ್ಪಣೆ

By Bhavana Gowda
ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ನಾಲ್ವಡಿ ಶೈಲಿಯ ಮೈಸೂರು ಪೇಟ ಧರಿಸಿ ಭೈರವೈಕ್ಯ ಮಂದಿರ ಲೋಕಾರ್ಪಣೆ

ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 2000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇಡೀ ಕ್ಷೇತ್ರವು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಪವಿತ್ರ ಕ್ಷೇತ್ರ ಆದಿಚುಂಚನಗಿರಿ ಈಗ ಸಂಭ್ರಮದ ಅಲೆಯಲ್ಲಿ ಮುಳುಗಿದೆ. ನಾಳೆ (ಏಪ್ರಿಲ್ 15) ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದು, ವಿಶೇಷ ಆಕರ್ಷಣೆಯಾಗಿ ಮೈಸೂರು ರಾಜವಂಶಸ್ಥರ ಶೈಲಿಯ ಪೇಟವನ್ನು ಧರಿಸಲಿದ್ದಾರೆ.

ಪೇಟದ ವಿಶೇಷತೆಗಳೇನು?

ಮೈಸೂರಿನ ಹೆಸರಾಂತ ಕಲಾವಿದ ನಂದನ್ ಸಿಂಗ್ ಅವರು ಐದು ದಿನಗಳ ಕಾಲ ಶ್ರಮವಹಿಸಿ ಈ ಪೇಟವನ್ನು ಸಿದ್ಧಪಡಿಸಿದ್ದಾರೆ. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಪೇಟದ ಮಾದರಿಯಲ್ಲಿದೆ. ಬನಾರಸ್ ಬಟ್ಟೆಯಿಂದ ಸಿದ್ಧವಾಗಿರುವ ಈ ಪೇಟದ ಮಧ್ಯಭಾಗದಲ್ಲಿ ಮೈಸೂರು ಸಂಸ್ಥಾನದ ರಾಜ ಲಾಂಛನವಾದ ‘ಗಂಡಭೇರುಂಡ’ ವಿನ್ಯಾಸವನ್ನು ಅಳವಡಿಸಲಾಗಿದೆ. ‘ನಮ್ಮೂರು ನಮ್ಮೋರು’ ಸೇವಾ ಸಂಸ್ಥೆಯು ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ಈ ವಿಶೇಷ ಕಾಣಿಕೆಯನ್ನು ಪ್ರಧಾನಿಗಳಿಗೆ ನೀಡುತ್ತಿದೆ.

ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ

ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ ದ್ರಾವಿಡ ಶೈಲಿಯ ವಾಸ್ತುಶಿಲ್ಪದಿಂದ ಕೂಡಿದೆ. ಇದನ್ನು ಪ್ರಧಾನಿಗಳು ಉದ್ಘಾಟಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬಿಜಿಎಸ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಪ್ರಧಾನಿ ಮೋದಿಯವರ ವೇಳಾಪಟ್ಟಿ

ಪ್ರಧಾನಿ ಕಾರ್ಯಕ್ರಮದ ವಿವರ ಹೀಗಿದೆ:

ಬೆಳಿಗ್ಗೆ: ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

10:50 AM: ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್‌ಗೆ ತಲುಪಲಿದ್ದಾರೆ.

11:00 AM: ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಮಂದಿರದ ಉದ್ಘಾಟನೆ ನೆರವೇರಿಸಲಿದ್ದಾರೆ.

ಮಧ್ಯಾಹ್ನ: ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ನಿರ್ಗಮನ: ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಮರಳಿ, ಅಲ್ಲಿಂದ ಕೇರಳ ಪ್ರವಾಸಕ್ಕೆ ತೆರಳಲಿದ್ದಾರೆ.

ಭದ್ರತೆ: ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 2000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇಡೀ ಕ್ಷೇತ್ರವು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.