ಮಂಡ್ಯ: ಭಾರತದ ಆಧ್ಯಾತ್ಮಿಕ ಭೂಪಟದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇಂದು ಇತಿಹಾಸ ನಿರ್ಮಾಣವಾಯಿತು. ಮಠದ 71ನೇ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಐಕ್ಯ ಸ್ಥಳದಲ್ಲಿ ನಿರ್ಮಿಸಲಾದ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆಗೊಳಿಸಿದರು.
ದ್ರಾವಿಡ ಶೈಲಿಯ ವಾಸ್ತುಶಿಲ್ಪದ ವೈಭವ
ಸುಮಾರು 10 ವರ್ಷಗಳ ಹಿಂದೆ ನಿರ್ಮಾಣ ಆರಂಭಗೊಂಡಿದ್ದ ಈ ಮಂದಿರವು 80 ಕೋಟಿ ರೂಪಾಯಿ ವೆಚ್ಚದಲ್ಲಿ ತಲೆಎತ್ತಿದೆ. ಇದು ಕೇವಲ ಮಂದಿರವಲ್ಲ, ಬದಲಿಗೆ ಹೊಯ್ಸಳ, ಚಾಲುಕ್ಯ, ಚೋಳ ಮತ್ತು ದ್ರಾವಿಡ ಶೈಲಿಗಳ ಸಮ್ಮಿಲನವಿರುವ ಅದ್ಭುತ ವಾಸ್ತುಶಿಲ್ಪದ ಕಣಜವಾಗಿದೆ.
ವಿಶೇಷ ಪೂಜೆ: ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿಯವರು ಜ್ವಾಲಾಪೀಠದ ದರ್ಶನ ಪಡೆದು, ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಮತ್ತು ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ತ್ರಿವಿಧ ದಾಸೋಹದ ನೆನಪು: ಎಚ್‌ಡಿ ಕುಮಾರಸ್ವಾಮಿ ಭಾಷಣ
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, "ಬಾಲಗಂಗಾಧರನಾಥ ಸ್ವಾಮೀಜಿಯವರು ಅಕ್ಷರ, ಅನ್ನ ಮತ್ತು ಆರೋಗ್ಯ ಎಂಬ ತ್ರಿವಿಧ ದಾಸೋಹದ ಮೂಲಕ ಕ್ರಾಂತಿ ಮಾಡಿದವರು. ಒಂದು ಸಣ್ಣ ಮಠವನ್ನು ಜಾಗತಿಕ ಮಟ್ಟದ ಶ್ರದ್ಧಾ ಕೇಂದ್ರವಾಗಿ ಬೆಳೆಸಿದ ಅವರ ಹೆಸರಿನಲ್ಲಿ ಈ ಮಂದಿರ ಲೋಕಾರ್ಪಣೆಯಾಗಿರುವುದು ಅರ್ಥಪೂರ್ಣ" ಎಂದರು.
ಕೋಟ್ಯಾಂತರ ಭಕ್ತರ ಕನಸು ನನಸಾಗಿದೆ: ನಿರ್ಮಲಾನಂದ ಶ್ರೀ
ಮಠದ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. "2016ರಲ್ಲಿ ಮೋದಿ ಅವರು ಆರಂಭಿಸಿದ ಸ್ಟಾರ್ಟ್-ಅಪ್ ಇಂಡಿಯಾ ಯೋಜನೆ ಇಂದು ಲಕ್ಷಾಂತರ ಉದ್ಯಮಗಳನ್ನು ಸೃಷ್ಟಿಸಿದೆ. ಅವರ ದೂರದೃಷ್ಟಿಯೇ ದೇಶದ ಆರ್ಥಿಕ ಪ್ರಗತಿಗೆ ಕಾರಣ. ಅವರ ಆಗಮನದಿಂದ ಮಠದ ಭಕ್ತರ ದಶಕಗಳ ಆಸೆ ಈಡೇರಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಗ್ರಂಥಗಳ ಬಿಡುಗಡೆ
ಮಂದಿರ ಉದ್ಘಾಟನೆಯ ಜೊತೆಗೆ ಪ್ರಧಾನಿ ಮೋದಿ ಅವರು ‘ಸೌಂದರ್ಯಲಹರೀ’ ಮತ್ತು ‘ಶಿವಮಹಿಮ ಸ್ತೋತ್ರಮ್’ ಎಂಬ ಗ್ರಂಥಗಳನ್ನು ಲೋಕಾರ್ಪಣೆ ಮಾಡಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಕಾರ್ಯದಲ್ಲಿ ಸಾಥ್ ನೀಡಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರದುದ್ದಕ್ಕೂ ಹೈ-ಅಲರ್ಟ್ ಘೋಷಿಸಲಾಗಿತ್ತು. ಎಸ್‌ಪಿಜಿ (SPG) ಮತ್ತು 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ತೊಡಗಿದ್ದರು. ಮಧ್ಯಾಹ್ನ 12.10ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಮರಳಿದ ಪ್ರಧಾನಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿದರು.