Skip to main content
ವಿಡಿಯೋ
crime

ತಾಯಿಯ ನರಳಾಟ ನೋಡಲಾರದೆ 4ನೇ ಮಹಡಿಯಿಂದ ತಳ್ಳಿ ಕೊಂದ ಮಗ..!

By Bhavana Gowda
ತಾಯಿಯ ನರಳಾಟ ನೋಡಲಾರದೆ 4ನೇ ಮಹಡಿಯಿಂದ ತಳ್ಳಿ ಕೊಂದ ಮಗ..!

"ತಾಯಿ ಪಡುತ್ತಿದ್ದ ಕಷ್ಟವನ್ನು ನೋಡಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಆ ನರಕಯಾತನೆಯ ಬದುಕಿನಿಂದ ಅವರಿಗೆ ಮುಕ್ತಿ ನೀಡಲು ಈ ಕಠಿಣ ನಿರ್ಧಾರ ಮಾಡಿದೆ" ಎಂದು ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಬೆಂಗಳೂರು: ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿ (RR Nagar) ಮನುಕುಲವೇ ಮರುಗುವಂತಹ ಘಟನೆಯೊಂದು ನಡೆದಿದೆ. ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ವೃದ್ಧ ತಾಯಿಯ ಯಾತನೆಯನ್ನು ಸಹಿಸಲಾರದ ಮಗ, ಆಕೆಯನ್ನು ನಾಲ್ಕನೇ ಅಂತಸ್ತಿನಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡಿದ್ದಾನೆ.

ಘಟನೆಯ ವಿವರ:

ಆರ್.ಆರ್. ನಗರದ ಬಿಇಎಂಎಲ್ ಲೇಔಟ್‌ನ 3ನೇ ಹಂತದ ನಿವಾಸಿ ಸಾವಿತ್ರಮ್ಮ (75) ಕೊಲೆಯಾದ ದುರ್ದೈವಿ. ಈ ಸಂಬಂಧ ಆಕೆಯ ಮಗ ಸಿ. ವೆಂಕಟೇಶ್ (ದಶರಥ್) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ವರ್ಷಗಳಿಂದ ತಾಯಿಯ ಸೇವೆಯನ್ನು ಮಾಡುತ್ತಿದ್ದ ಎನ್ನಲಾಗಿದೆ.

ಕೊಲೆಗೆ ಕಾರಣವೇನು?

ಸಾವಿತ್ರಮ್ಮ ಅವರು ಕಳೆದ ಮೂರು ವರ್ಷಗಳಿಂದ ಪಾರ್ಶ್ವವಾಯುವಿನಿಂದ (Stroke) ಬಳಲುತ್ತಿದ್ದರು. ಮಗ ವೆಂಕಟೇಶ್ ಎಷ್ಟೇ ಆಸ್ಪತ್ರೆಗಳಿಗೆ ತೋರಿಸಿದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ತಾಯಿ ಪ್ರತಿದಿನ ಅನುಭವಿಸುತ್ತಿದ್ದ ದೈಹಿಕ ನೋವು ಮತ್ತು ನರಳಾಟವನ್ನು ನೋಡಿ ವೆಂಕಟೇಶ್ ಮಾನಸಿಕವಾಗಿ ಜರ್ಜರಿತನಾಗಿದ್ದ ಎಂದು ತಿಳಿದುಬಂದಿದೆ. "ತಾಯಿ ಪಡುತ್ತಿದ್ದ ಕಷ್ಟವನ್ನು ನೋಡಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಆ ನರಕಯಾತನೆಯ ಬದುಕಿನಿಂದ ಅವರಿಗೆ ಮುಕ್ತಿ ನೀಡಲು ಈ ಕಠಿಣ ನಿರ್ಧಾರ ಮಾಡಿದೆ" ಎಂದು ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.