Skip to main content
ವಿಡಿಯೋ
crime

ಶ್ರೀಕಿಯ ಐಷಾರಾಮಿ ಹುಚ್ಚಾಟಕ್ಕೆ ನಲಪಾಡ್ ಫೈನಾನ್ಸ್: 57 ಲಕ್ಷದ ಕಾರಿನ ವ್ಯವಹಾರ ಇಡಿ ತನಿಖೆಯಲ್ಲಿ ಬಯಲು..!

By Bhavana Gowda
ಶ್ರೀಕಿಯ ಐಷಾರಾಮಿ ಹುಚ್ಚಾಟಕ್ಕೆ ನಲಪಾಡ್ ಫೈನಾನ್ಸ್: 57 ಲಕ್ಷದ ಕಾರಿನ ವ್ಯವಹಾರ ಇಡಿ ತನಿಖೆಯಲ್ಲಿ ಬಯಲು..!

ಈಗಾಗಲೇ 2024ರಲ್ಲಿ ಸಿಐಡಿಯ ವಿಶೇಷ ತನಿಖಾ ದಳ (SIT) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಮತ್ತು ಡಿಜಿಪಿ ಪುತ್ರನ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.

ಬೆಂಗಳೂರು: ಬಿಟ್‌ಕಾಯಿನ್ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಮೊಹಮ್ಮದ್ ನಲಪಾಡ್ ಮತ್ತು ಹ್ಯಾಕರ್ ಶ್ರೀಕಿ ನಡುವಿನ ಆರ್ಥಿಕ ನಂಟಿನ ಒಂದೊಂದೇ ರೋಚಕ ಕಥೆಗಳು ಹೊರಬರುತ್ತಿವೆ. ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಈಗ ಕೇಳಿಬರುತ್ತಿರುವುದು ಒಂದು ದುಬಾರಿ 'ಪೋರ್ಷೆ' ಕಾರಿನ ವಿಲಕ್ಷಣ ಕಥೆ.

ಲ್ಯಾವೆಲ್ಲೆ ರಸ್ತೆಯಲ್ಲಿ ನಡೆದಿದ್ದೇನು?

2015-16ರ ಸುಮಾರಿಗೆ ಮೊಹಮ್ಮದ್ ನಲಪಾಡ್, ಶ್ರೀಕಿ ಮತ್ತು ಒಬ್ಬ ಡಿಜಿಪಿ ಪುತ್ರ ಸೇರಿ ಬೆಂಗಳೂರಿನ ಪ್ರತಿಷ್ಠಿತ ಲ್ಯಾವೆಲ್ಲೆ ರಸ್ತೆಯ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರ್ ಶೋರೂಂಗೆ ಭೇಟಿ ನೀಡಿದ್ದರು. ಅಲ್ಲಿ ಪೋರ್ಷೆ ಕಾರೊಂದರ ಟೆಸ್ಟ್ ಡ್ರೈವ್‌ಗೆ ಮುಂದಾದಾಗ ಅಸಲಿ ಹೈಡ್ರಾಮಾ ಶುರುವಾಗಿತ್ತು.

ಕಾರಿನ ಸೀಟಿಗೆ ಬೆಂಕಿ ಹಚ್ಚಿದ್ದ ಶ್ರೀಕಿ!

ಟೆಸ್ಟ್ ಡ್ರೈವ್ ಮಾಡುವಾಗ ಶ್ರೀಕಿ ಕಾರಿನೊಳಗೆ ಸಿಗರೇಟ್ ಸೇದಲು ಮುಂದಾಗಿದ್ದ. ಇದಕ್ಕೆ ಶೋರೂಂ ಎಕ್ಸಿಕ್ಯೂಟೀವ್ ವಿರೋಧ ವ್ಯಕ್ತಪಡಿಸಿದಾಗ ಗಲಾಟೆ ನಡೆದಿತ್ತು. ಈ ವೇಳೆ ತನ್ನ "ಪವರ್" ತೋರಿಸಲು ಮುಂದಾದ ಈ ಗ್ಯಾಂಗ್, ಅದೇ ಕ್ಷಣದಲ್ಲಿ 57 ಲಕ್ಷ ರೂಪಾಯಿ ನೀಡಿ ಆ ಕಾರನ್ನು ಖರೀದಿ ಮಾಡಿತು.

ಆದರೆ ಕಾರು ಕೊಂಡ ಉದ್ದೇಶ ಪ್ರಯಾಣಕ್ಕಲ್ಲ, ಬದಲಾಗಿ ಸೇಡು ತೀರಿಸಿಕೊಳ್ಳಲು:

ಕಾರು ಖರೀದಿಸಿದ ತಕ್ಷಣ ಶೋರೂಂ ಮುಂದೆಯೇ ನಿಲ್ಲಿಸಿ ಶ್ರೀಕಿ ಸಿಗರೇಟ್ ಸೇದಿದ್ದ. ಸಿಗರೇಟ್ ಬೂದಿಯನ್ನು (Ash) ಕಾರಿನ ದುಬಾರಿ ಸೀಟುಗಳ ಮೇಲೆ ಬೇಕೆಂದೇ ಉದುರಿಸಿದ್ದ, ಅಷ್ಟಕ್ಕೇ ನಿಲ್ಲದೆ, ಲೈಟರ್‌ನಿಂದ ಕಾರಿನ ಸೀಟಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ ಎಂದು ತನಿಖಾ ಮೂಲಗಳು ತಿಳಿಸಿವೆ.

ಕೇವಲ ಕೆಲವೇ ದಿನದಲ್ಲಿ 10 ಲಕ್ಷ ನಷ್ಟ!

ಮೋಜಿನ ಹೆಸರಲ್ಲಿ ಕಾರನ್ನು ಹಾಳು ಮಾಡಿದ ಈ ಗ್ಯಾಂಗ್, ಕೆಲವೇ ದಿನಗಳ ನಂತರ ಅದೇ ಕಾರನ್ನು ಮತ್ತೆ ಅದೇ ಶೋರೂಂಗೆ ವಾಪಾಸ್ ಮಾರಾಟ ಮಾಡಿತು.

ಖರೀದಿಸಿದ ಬೆಲೆ: ₹57 ಲಕ್ಷ

ಮಾರಾಟ ಮಾಡಿದ ಬೆಲೆ: ₹47 ಲಕ್ಷ

ಕೇವಲ ತನ್ನ ಅಹಂ ತೃಪ್ತಿಪಡಿಸಿಕೊಳ್ಳಲು ಶ್ರೀಕಿ ಮಾಡಿದ ಈ ಹುಚ್ಚಾಟಕ್ಕೆ ನಲಪಾಡ್ ಹಣ ಪಾವತಿಸಿದ್ದರು ಎಂಬುದು ಈಗ ಇಡಿ ತನಿಖೆಯ ಪ್ರಮುಖ ಅಂಶವಾಗಿದೆ.

ತನಿಖೆಯ ಉರುಳು

ಈಗಾಗಲೇ 2024ರಲ್ಲಿ ಸಿಐಡಿಯ ವಿಶೇಷ ತನಿಖಾ ದಳ (SIT) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಮತ್ತು ಡಿಜಿಪಿ ಪುತ್ರನ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಶ್ರೀಕಿಯ ಇಂತಹ ಹೈಫೈ ಲೈಫ್‌ಸ್ಟೈಲ್‌ಗೆ ನಲಪಾಡ್ ಹಣದ ಮೂಲ ಯಾವುದು? ಮತ್ತು ಇವರಿಬ್ಬರ ನಡುವೆ ನಡೆದ ಇತರೆ ಹಣಕಾಸಿನ ವ್ಯವಹಾರಗಳೇನು ಎಂಬ ಬಗ್ಗೆ ಇಡಿ ಈಗ ದಾಖಲೆಗಳ ಸಮೇತ ತನಿಖೆ ನಡೆಸುತ್ತಿದೆ.