ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹೈಕೋರ್ಟ್ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯಾದ ಹಿಂದಿಗೆ ಗ್ರೇಡ್ ಬದಲಾಗಿ ಅಂಕಗಳನ್ನೇ (Marks) ನೀಡಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ. ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರದ ವಾದವೇನಿತ್ತು?
ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, "ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಈ ಒತ್ತಡವನ್ನು ಕಡಿಮೆ ಮಾಡಲು ಅಂಕದ ಬದಲು ಗ್ರೇಡ್ ನೀಡುವ ಪದ್ಧತಿಯನ್ನು ಜಾರಿಗೆ ತರಲು ಸರ್ಕಾರ ಕರಡು ನಿಯಮ ರೂಪಿಸುತ್ತಿದೆ," ಎಂದು ತಿಳಿಸಿದರು. ಅಲ್ಲದೆ, ವಿಭಾಗೀಯ ಪೀಠದಲ್ಲಿ ಈ ಕುರಿತ ಪಿಐಎಲ್ ಈಗಾಗಲೇ ವಜಾಗೊಂಡಿದೆ ಎಂಬ ಅಂಶವನ್ನು ಕೋರ್ಟ್ ಗಮನಕ್ಕೆ ತಂದರು.
ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆಗಳ ಸುರಿಮಳೆ!
ಸರ್ಕಾರದ ವಾದವನ್ನು ಒಪ್ಪದ ನ್ಯಾಯಾಲಯವು ಕೆಲವು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿತು:
ಅಧಿಸೂಚನೆಯಲ್ಲಿ ಸ್ಪಷ್ಟತೆ ಎಲ್ಲಿ?: ಪರೀಕ್ಷಾ ಅಧಿಸೂಚನೆ ಹೊರಡಿಸಿದಾಗಲೇ ಗ್ರೇಡ್ ಪದ್ಧತಿಯ ಬಗ್ಗೆ ಸ್ಪಷ್ಟಪಡಿಸಬೇಕಿತ್ತು. ಅಧಿಸೂಚನೆಯಲ್ಲಿ ಇಲ್ಲದ ಹೊಸ ನಿಯಮವನ್ನು ದಿಢೀರ್ ಜಾರಿಗೊಳಿಸುವುದು ಸರಿಯಲ್ಲ.
ಎಲ್ಲರನ್ನೂ ಪಾಸ್ ಮಾಡುವುದಾದರೆ ಪರೀಕ್ಷೆ ಯಾಕೆ?: "ಪಿಯುಸಿಯಲ್ಲಿ ಈಗ 83% ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ," ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ನಿಯಮ ರೂಪಿಸುವ ಮುನ್ನ ಬದಲಾವಣೆ ಬೇಡ: ಸರ್ಕಾರ ಹೊಸ ನಿಯಮ ರೂಪಿಸಿದ ಬಳಿಕ ತನ್ನ ನಿರ್ಧಾರ ಕೈಗೊಳ್ಳಬಹುದು. ಆದರೆ ನಿಯಮ ಜಾರಿಗೆ ಬರುವ ಮುನ್ನ ಅಂಕ ನೀಡುವ ಹಳೆಯ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿತು.
2025-26ನೇ ಸಾಲಿಗೆ ಅನ್ವಯ
ಹೈಕೋರ್ಟ್ ಆದೇಶದಂತೆ, 2025-26ನೇ ಸಾಲಿಗೆ ಹಿಂದಿ ಭಾಷೆಗೆ ಕಡ್ಡಾಯವಾಗಿ ಅಂಕಗಳನ್ನೇ ನೀಡಬೇಕು. ಈ ವರ್ಷದ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕಗಳು ಸೇರ್ಪಡೆಯಾಗಲಿವೆ. ಮುಂದಿನ ವರ್ಷದಿಂದ ಸರ್ಕಾರ ನಿಯಮಗಳನ್ನು ರೂಪಿಸಿ ಗ್ರೇಡ್ ನೀಡುವ ಬಗ್ಗೆ ಯೋಚಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಇದರಿಂದಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಪಟ್ಟಿಯಲ್ಲಿ ಹಿಂದಿ ಭಾಷೆಯ ಅಂಕಗಳು ಸ್ಥಾನ ಪಡೆಯುವುದು ಈಗ ಖಚಿತವಾಗಿದೆ.