ರಾಮನಗರ: "ಮಹಿಳಾ ಮೀಸಲಾತಿ ವಿಧೇಯಕವನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಇಂಡಿ (I.N.D.I.A) ಒಕ್ಕೂಟವು ದೇಶದ ಮಹಿಳೆಯರಿಗೆ ಅಗೌರವ ತೋರಿದೆ," ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ಮತ್ತು ಡಿಲಿಮಿಟೇಷನ್ (ಕ್ಷೇತ್ರ ಪುನರ್ವಿಂಗಡಣೆ) ಕುರಿತು ವಿರೋಧ ಪಕ್ಷಗಳ ನಿಲುವನ್ನು ತೀವ್ರವಾಗಿ ಖಂಡಿಸಿದರು.
ಮಹಿಳಾ ಮೀಸಲಾತಿ ದೇವೇಗೌಡರ ಕನಸು
ಮಹಿಳಾ ಮೀಸಲಾತಿ ದೇಶಕ್ಕೆ ಹೊಸದೇನಲ್ಲ ಎಂದು ನೆನಪಿಸಿದ ಸಂಸದರು, "ಹಿಂದೆ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತಂದಿದ್ದರು. 1996ರಲ್ಲಿ ಅವರು ಪ್ರಧಾನಿಯಾದಾಗಲೂ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ಮಂಡಿಸಿದ್ದರು. ಆದರೆ ದುರದೃಷ್ಟವಶಾತ್ ಆಗ ಅದು ಪಾಸಾಗಲಿಲ್ಲ. ಬಳಿಕ ವಾಜಪೇಯಿ ಅವರ ಅವಧಿಯಲ್ಲೂ ಈ ಪ್ರಯತ್ನಕ್ಕೆ ಸೋಲಾಯಿತು," ಎಂದು ಇತಿಹಾಸವನ್ನು ಮೆಲುಕು ಹಾಕಿದರು. "ಈಗ ಪ್ರಧಾನಿ ನರೇಂದ್ರ ಮೋದಿಯವರು ಶೇ. 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಇಂತಹ ಸುವರ್ಣ ಅವಕಾಶವನ್ನು ವಿರೋಧ ಪಕ್ಷಗಳು ಹಾಳುಮಾಡುತ್ತಿವೆ," ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಡಿಲಿಮಿಟೇಷನ್‌ನಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲ್ಲ
ಕ್ಷೇತ್ರ ಪುನರ್ವಿಂಗಡಣೆ (Delimitation) ಕುರಿತ ವಿಪಕ್ಷಗಳ ಆತಂಕವನ್ನು ದೂರ ತಳ್ಳಿದ ಡಾ. ಮಂಜುನಾಥ್, "ಕಳೆದ 55 ವರ್ಷಗಳಿಂದ ಡಿಲಿಮಿಟೇಷನ್ ನಡೆದಿಲ್ಲ. ದೇಶದ ಜನಸಂಖ್ಯೆ ಹೆಚ್ಚಾದಾಗ ಇದು ಅನಿವಾರ್ಯ ಮತ್ತು ಅವಶ್ಯಕ. ಈ ಸಾಮಾನ್ಯ ಜ್ಞಾನವೂ ವಿರೋಧ ಪಕ್ಷದವರಿಗೆ ಇಲ್ಲವಾಗಿದೆ. ಡಿಲಿಮಿಟೇಷನ್‌ನಿಂದ ದಕ್ಷಿಣ ಭಾರತಕ್ಕೆ ಅಥವಾ ನಮ್ಮ ರಾಜ್ಯಕ್ಕೆ ಯಾವುದೇ ಅನ್ಯಾಯವಾಗಲ್ಲ, ಬದಲಿಗೆ ಕರ್ನಾಟಕದ ಸಂಸದರ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ," ಎಂದು ಸ್ಪಷ್ಟಪಡಿಸಿದರು.
ಖರ್ಗೆ ಹೇಳಿಕೆಯಲ್ಲಿ ಹತಾಶೆ ಎದ್ದು ಕಾಣುತ್ತಿದೆ
ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದಾರೆನ್ನಲಾದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, "ಖರ್ಗೆ ಅವರಂತಹ ಹಿರಿಯ ನಾಯಕರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. ಅವರ ಮಾತುಗಳಲ್ಲಿ ಸೋಲಿನ ಹತಾಶೆ ಎದ್ದು ಕಾಣುತ್ತಿದೆ. ಪ್ರಧಾನ ಮಂತ್ರಿ ಸ್ಥಾನಕ್ಕೆ ತನ್ನದೇ ಆದ ಗೌರವವಿದೆ, ಯಾರೇ ಆದರೂ ಆ ಸ್ಥಾನವನ್ನು ಗೌರವಿಸಬೇಕು. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಸೂಕ್ತ ಸಮಯದಲ್ಲಿ ಅವರೇ ಉತ್ತರ ನೀಡಲಿದ್ದಾರೆ," ಎಂದು ತಿರುಗೇಟು ನೀಡಿದರು.