Skip to main content
ವಿಡಿಯೋ
crime

ಕಡಿಮೆ ಬೆಲೆಗೆ ಚಿನ್ನದ ಆಸೆ ತೋರಿಸಿ 2 ಕೋಟಿ ರೂ. ವಂಚನೆ: ಬೆಂಗಳೂರಿನಲ್ಲಿ ಖತರ್ನಾಕ್ ಜಾಲ ಪತ್ತೆ

By Bhavana Gowda
ಕಡಿಮೆ ಬೆಲೆಗೆ ಚಿನ್ನದ ಆಸೆ ತೋರಿಸಿ 2 ಕೋಟಿ ರೂ. ವಂಚನೆ: ಬೆಂಗಳೂರಿನಲ್ಲಿ ಖತರ್ನಾಕ್ ಜಾಲ ಪತ್ತೆ

ವ್ಯಾಪಾರ ಮುಗಿಸಿ ಹಣ ಪಾವತಿಸಿದ ಪುನೀತ್ ಅವರಿಗೆ, "ಇವತ್ತು ಸ್ಟಾಕ್ ಇಲ್ಲ, ನಾಳೆ ಬಂದು ಚಿನ್ನ ತೆಗೆದುಕೊಂಡು ಹೋಗಿ" ಎಂದು ಮಾಲೀಕ ಇಂದ್ರಚಂದ್ ಹೇಳಿ ಕಳುಹಿಸಿದ್ದಾನೆ. ಮರುದಿನ ಪುನೀತ್ ಅಂಗಡಿಗೆ ಹೋದಾಗ ಇಂದ್ರಚಂದ್ ಉಲ್ಟಾ ಹೊಡೆದಿದ್ದಾನೆ.

ಬೆಂಗಳೂರು: ಚಿನ್ನದ ಬೆಲೆ ಇಳಿಕೆಯಾಗಿದೆ, ಮೇಕಿಂಗ್ ಚಾರ್ಜಸ್ (ವೇಸ್ಟೇಜ್) ಕಡಿಮೆ ಇದೆ ಎಂದು ನಂಬಿ ಚಿನ್ನ ಖರೀದಿಸಲು ಮುಂದಾಗುತ್ತಿದ್ದೀರಾ? ಹಾಗಿದ್ದರೆ ಸ್ವಲ್ಪ ತಡೆಯಿರಿ. ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿರುವ ಜಾಲವೊಂದು ಸಕ್ರಿಯವಾಗಿದೆ. ಮದುವೆಗಾಗಿ ಚಿನ್ನ ಖರೀದಿಸಲು ಹೋದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ನಾಮ ಹಾಕಿರುವ ಘಟನೆ ಎಚ್.ಎಸ್.ಆರ್ ಲೇಔಟ್‌ನಲ್ಲಿ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ: ನಂಬಿಸಿ ಕುತ್ತಿಗೆ ಕುಯ್ದ ಸಂಬಂಧಿ!

ಸರ್ಜಾಪುರ ಮೂಲದ ಪುನೀತ್ ಎಂಬುವವರು ತಮ್ಮ ಮನೆಯ ಮದುವೆ ಕಾರ್ಯಕ್ಕಾಗಿ ಚಿನ್ನ ಖರೀದಿಸಲು ಯೋಜಿಸಿದ್ದರು. ಈ ವೇಳೆ ಅವರ ಸಂಬಂಧಿ ಸವಿತಾ ರೆಡ್ಡಿ ಎಂಬಾಕೆ, ಎಚ್.ಎಸ್.ಆರ್ ಲೇಔಟ್‌ನ 'ಎಂ.ಪಿ ಜ್ಯುವೆಲ್ಲರ್ಸ್' ನಲ್ಲಿ ವೇಸ್ಟೇಜ್ ತುಂಬಾ ಕಡಿಮೆ ಇದೆ, ಅಲ್ಲಿಗೆ ಹೋಗೋಣ ಎಂದು ಪುನೀತ್ ಅವರನ್ನು ನಂಬಿಸಿದ್ದಾರೆ. ಕಳೆದ ಮಾರ್ಚ್ 27 ರಂದು ಸವಿತಾ ರೆಡ್ಡಿ ಖುದ್ದಾಗಿ ಪುನೀತ್ ಅವರನ್ನು ಜ್ಯುವೆಲ್ಲರಿ ಶಾಪ್‌ಗೆ ಕರೆದೊಯ್ದಿದ್ದಾರೆ. ಅಲ್ಲಿನ ಮಾಲೀಕ ಇಂದ್ರಚಂದ್ ಎಂಬಾತನ ಜೊತೆ ಸೇರಿ 2 ಕೋಟಿ ರೂಪಾಯಿ ಮೊತ್ತದ ಚಿನ್ನದ ವ್ಯಾಪಾರ ಕುದುರಿಸಿದ್ದಾರೆ.

ನಾಳೆ ಬನ್ನಿ ಅಂದವರು ನಾಪತ್ತೆ!

ವ್ಯಾಪಾರ ಮುಗಿಸಿ ಹಣ ಪಾವತಿಸಿದ ಪುನೀತ್ ಅವರಿಗೆ, "ಇವತ್ತು ಸ್ಟಾಕ್ ಇಲ್ಲ, ನಾಳೆ ಬಂದು ಚಿನ್ನ ತೆಗೆದುಕೊಂಡು ಹೋಗಿ" ಎಂದು ಮಾಲೀಕ ಇಂದ್ರಚಂದ್ ಹೇಳಿ ಕಳುಹಿಸಿದ್ದಾನೆ. ಮರುದಿನ ಪುನೀತ್ ಅಂಗಡಿಗೆ ಹೋದಾಗ ಇಂದ್ರಚಂದ್ ಉಲ್ಟಾ ಹೊಡೆದಿದ್ದಾನೆ. "ನಾನು ಸವಿತಾ ಜೊತೆ ಮಾತನಾಡಿದ್ದೇನೆ, ನೀನು ಹೋಗು" ಎಂದು ಹೇಳಿ ದರ್ಪ ತೋರಿದ್ದಾನೆ. ಇತ್ತ ಸವಿತಾಳನ್ನು ಕೇಳಿದರೆ ಆಕೆ ಜ್ಯುವೆಲ್ಲರಿ ಮಾಲೀಕನ ಕಡೆಗೆ ಕೈ ತೋರಿಸಿದ್ದಾಳೆ. ಕೊನೆಗೆ ಇವರಿಬ್ಬರೂ ಸೇರಿ ತನಗೆ ವಂಚಿಸಿರುವುದು ಪುನೀತ್‌ಗೆ ಅರಿವಾಗಿದೆ.

ವಂಚಕನ ಹಿಸ್ಟರಿ ಕೇಳಿ ಪುನೀತ್ ಶಾಕ್!

ಇಂದ್ರಚಂದ್ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಹಳೇ ವಂಚಕ ಎಂಬುದು ತಿಳಿದುಬಂದಿದೆ. ಲೀಗಲ್ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಈತ ಕೇವಲ ನಗದು (Cash) ರೂಪದಲ್ಲಿ ಮಾತ್ರ ವ್ಯವಹಾರ ಮಾಡುತ್ತಿದ್ದ. ಸವಿತಾ ರೆಡ್ಡಿ ಎಂಬಾಕೆ ಅಮಾಯಕರನ್ನು ಹುಡುಕಿ ಈತನ ಬಳಿ ಕರೆತರುವ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು ಎಂಬ ಕಹಿ ಸತ್ಯ ಬಯಲಾಗಿದೆ.

ಪೊಲೀಸರ ವಿರುದ್ಧ ಗಂಭೀರ ಆರೋಪ: ಎಫ್‌ಐಆರ್ ಆದರೂ ಬಂಧನವಿಲ್ಲ!

ಈ ವಂಚನೆ ಕುರಿತು ಪುನೀತ್ ಎಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರ ನಡೆ ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ:

ಆರೋಪಿ ರಾಜಾರೋಷ: ಎಫ್‌ಐಆರ್ ದಾಖಲಾಗಿದ್ದರೂ ಆರೋಪಿ ಇಂದ್ರಚಂದ್ ತನ್ನ ಅಂಗಡಿಯಲ್ಲಿ ರಾಜಾರೋಷವಾಗಿ ವ್ಯವಹಾರ ನಡೆಸುತ್ತಿದ್ದಾನೆ.

ಜಾಮೀನು ಸಿಗದಿದ್ದರೂ ಬಂಧನವಿಲ್ಲ: ನ್ಯಾಯಾಲಯದಲ್ಲಿ ಆರೋಪಿಗೆ ಜಾಮೀನು ನಿರಾಕರಿಸಲ್ಪಟ್ಟಿದ್ದರೂ ಪೊಲೀಸರು ಆತನನ್ನು ಬಂಧಿಸಲು ಮುಂದಾಗುತ್ತಿಲ್ಲ.

ನಿರ್ಲಕ್ಷ್ಯದ ಆರೋಪ: ಅಗತ್ಯ ದಾಖಲೆಗಳನ್ನು ನೀಡಿದರೂ ಪೊಲೀಸರು ಆರೋಪಿಯ ಬೆನ್ನಿಗೆ ನಿಂತಿದ್ದಾರೆ ಎಂದು ಸಂತ್ರಸ್ತ ಪುನೀತ್ ಆಕ್ರೋಶ ಹೊರಹಾಕಿದ್ದಾರೆ.

ಸಾರ್ವಜನಿಕರ ಪ್ರಶ್ನೆ: "ಬೆಂಗಳೂರು ಕಮಿಷನರ್ ಸಾಹೇಬರೇ, ನಿಮ್ಮ ಪೊಲೀಸರ ಕಳ್ಳಾಟ ನೋಡಿ! ಜಾಮೀನು ಸಿಗದ ಆರೋಪಿ ಕಣ್ಣಮುಂದೆಯೇ ಇದ್ದರೂ ಬಂಧಿಸದ ಇವರಿಗೆ ಕಾನೂನಿನ ಭಯವಿಲ್ಲವೇ? ಉಳ್ಳವರಿಗೊಂದು ಕಾನೂನು, ಬಡವರಿಗೊಂದು ಕಾನೂನಾ?" ಎಂದು ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ.

ಚಿನ್ನ ಖರೀದಿಸುವ ಮುನ್ನ ಈ ಎಚ್ಚರಿಕೆ ಇರಲಿ:

ಪರಿಚಯದವರು ಹೇಳಿದ ತಕ್ಷಣ ದೊಡ್ಡ ಮೊತ್ತದ ಹಣವನ್ನು ಅಪರಿಚಿತ ಅಂಗಡಿಗಳಲ್ಲಿ ಹೂಡಿಕೆ ಮಾಡಬೇಡಿ.

ಯಾವಾಗಲೂ ಅಧಿಕೃತ ಬಿಲ್ ಮತ್ತು ಬ್ಯಾಂಕ್ ವಹಿವಾಟಿನ ಮೂಲಕವೇ ವ್ಯವಹಾರ ಮಾಡಿ.

ಮಾರುಕಟ್ಟೆ ದರಕ್ಕಿಂತ ಅತೀ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂದರೆ ಅಲ್ಲಿ ವಂಚನೆ ಇರುವ ಸಾಧ್ಯತೆ ಹೆಚ್ಚು.