Skip to main content
ವಿಡಿಯೋ
politics

"ದಕ್ಷಿಣ ರಾಜ್ಯಗಳಿಗೆ ಡಿಎಂಕೆ ದ್ರೋಹ": ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

By Bhavana Gowda
"ದಕ್ಷಿಣ ರಾಜ್ಯಗಳಿಗೆ ಡಿಎಂಕೆ ದ್ರೋಹ": ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

"ಪಕ್ಷದ ವಿಸ್ತರಣೆಯ ಬಗ್ಗೆ ಸ್ವತಂತ್ರವಾಗಿ ಮತ್ತು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹಿಂದಿನ ತಪ್ಪುಗಳನ್ನು ನಾವು ಮತ್ತೆ ಮಾಡುವುದಿಲ್ಲ. ಬೇರೆ ಪಕ್ಷಗಳ ರಾಜಕೀಯ ಅಸ್ಥಿರತೆಯ ಲಾಭ ಪಡೆಯುವ ಉದ್ದೇಶ ನಮಗಿಲ್ಲ. ಜೆಡಿಎಸ್ ಮೌಲ್ಯಾಧಾರಿತ ರಾಜಕಾರಣಕ್ಕೆ ಬದ್ಧವಾಗಿದೆ," ಎಂದು ಅವರು ಹೇಳಿದರು.

ನವದೆಹಲಿ: ಸಂವಿಧಾನದ (131ನೇ ತಿದ್ದುಪಡಿ) ಮಸೂದೆಯನ್ನು ವಿರೋಧಿಸುವ ಮೂಲಕ ತಮಿಳುನಾಡಿನ ಡಿಎಂಕೆ ಪಕ್ಷವು ದಕ್ಷಿಣದ ಇತರ ರಾಜ್ಯಗಳಿಗೆ ದೊಡ್ಡ ಅನ್ಯಾಯ ಮಾಡಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಭಾನುವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಜನರಲ್ಲಿ ಅನಗತ್ಯ ಗೊಂದಲ ಮೂಡಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಲುವು ಬದಲಿಸಿದ ಡಿಎಂಕೆ: ಎಚ್‌ಡಿಕೆ ಆಕ್ಷೇಪ

"ಆರಂಭದಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದ ಡಿಎಂಕೆ, ನಂತರ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಇದರಿಂದಾಗಿ ದಕ್ಷಿಣದ ರಾಜ್ಯಗಳಿಗೆ ಸಿಗಬೇಕಿದ್ದ ಒಂದು ಮಹತ್ವದ ಮತ್ತು ಪ್ರಯೋಜನಕಾರಿ ಅವಕಾಶ ತಪ್ಪಿಹೋಗಿದೆ," ಎಂದು ಕುಮಾರಸ್ವಾಮಿ ಹೇಳಿದರು.

ಮಾರ್ಚ್ ಮೂರನೇ ವಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿದ್ದ ಸಭೆಯನ್ನು ನೆನಪಿಸಿದ ಸಚಿವರು, "ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ (Delimitation) ಪ್ರಸ್ತಾವನೆಗಳ ಬಗ್ಗೆ ಎಲ್ಲಾ ಪಕ್ಷಗಳಿಗೆ ಮಾಹಿತಿ ನೀಡಲಾಗಿತ್ತು. ಅಂದು ಡಿಎಂಕೆ ಇದಕ್ಕೆ ಒಪ್ಪಿಗೆ ಸೂಚಿಸಿತ್ತು. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಜೂನ್‌ನಲ್ಲಿ ಸಂಸತ್ ಅಧಿವೇಶನ ಕರೆಯಲು ಸಲಹೆ ನೀಡಿದ್ದರು. ಆದರೆ ಈಗ ರಾಜಕೀಯ ಕಾರಣಗಳಿಗಾಗಿ ಬೆಂಬಲ ಹಿಂತೆಗೆದುಕೊಂಡು ಇಡೀ ದಕ್ಷಿಣ ಭಾರತಕ್ಕೆ ಅನಾನುಕೂಲ ಮಾಡಿದ್ದಾರೆ," ಎಂದು ದೂರಿದರು.

"ಕ್ಷೇತ್ರ ಮರುವಿಂಗಡಣೆಯಿಂದ ಅನ್ಯಾಯವಿಲ್ಲ"

ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಆರೋಪಗಳನ್ನು ಕುಮಾರಸ್ವಾಮಿ ತಳ್ಳಿಹಾಕಿದರು.

"ಇದು ದಕ್ಷಿಣದ ರಾಜ್ಯಗಳಿಗೆ ಮಾರಕವಾಗಿದ್ದರೆ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಯಾಕೆ ವಿರೋಧಿಸಲಿಲ್ಲ?" ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷವು ರಾಜಕೀಯ ಪ್ರೇರಿತವಾಗಿ ತನ್ನ ಮಿತ್ರಪಕ್ಷಗಳನ್ನು ಹಾದಿತಪ್ಪಿಸುತ್ತಿದೆ ಮತ್ತು ಸುಧಾರಣಾ ಪ್ರಕ್ರಿಯೆಯನ್ನು ಹಳಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. ದಕ್ಷಿಣ ರಾಜ್ಯಗಳ ಪ್ರತಿನಿಧಿಯಾಗಿ ನಾನು ಹೇಳುತ್ತಿದ್ದೇನೆ, ಕ್ಷೇತ್ರ ಮರುವಿಂಗಡಣೆಯಿಂದ ಯಾವುದೇ ಅನ್ಯಾಯವಾಗುತ್ತಿರಲಿಲ್ಲ. ಬದಲಾಗಿ ಡಿಎಂಕೆಯ ಸ್ವಾರ್ಥದಿಂದಾಗಿ ಒಂದು ಅಮೂಲ್ಯ ಅವಕಾಶ ನಷ್ಟವಾಗಿದೆ ಎಂದರು.

ಜಮೀರ್‌ ಅಹಮದ್ ಸೇರ್ಪಡೆ ವದಂತಿ: ಕುಮಾರಸ್ವಾಮಿ ಸ್ಪಷ್ಟನೆ

ಇದೇ ವೇಳೆ ಸಚಿವ ಬಿ.ಜೆಡ್. ಜಮೀರ್‌ ಅಹಮದ್ ಖಾನ್ ಮತ್ತೆ ಜೆಡಿಎಸ್ ಸೇರುತ್ತಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ" ಎಂದು ಸ್ಪಷ್ಟಪಡಿಸಿದರು.

"ಪಕ್ಷದ ವಿಸ್ತರಣೆಯ ಬಗ್ಗೆ ಸ್ವತಂತ್ರವಾಗಿ ಮತ್ತು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹಿಂದಿನ ತಪ್ಪುಗಳನ್ನು ನಾವು ಮತ್ತೆ ಮಾಡುವುದಿಲ್ಲ. ಬೇರೆ ಪಕ್ಷಗಳ ರಾಜಕೀಯ ಅಸ್ಥಿರತೆಯ ಲಾಭ ಪಡೆಯುವ ಉದ್ದೇಶ ನಮಗಿಲ್ಲ. ಜೆಡಿಎಸ್ ಮೌಲ್ಯಾಧಾರಿತ ರಾಜಕಾರಣಕ್ಕೆ ಬದ್ಧವಾಗಿದೆ," ಎಂದು ಅವರು ಹೇಳಿದರು.