Skip to main content
ವಿಡಿಯೋ
general

ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಮೆಟ್ರೋ ಮತ್ತು ಬಿಎಂಟಿಸಿಗೆ ಒಂದೇ ಸ್ಮಾರ್ಟ್ ಕಾರ್ಡ್..!

By Bhavana Gowda
ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಮೆಟ್ರೋ ಮತ್ತು ಬಿಎಂಟಿಸಿಗೆ ಒಂದೇ ಸ್ಮಾರ್ಟ್ ಕಾರ್ಡ್..!

ಮೆಟ್ರೋ ಮತ್ತು ಬಿಎಂಟಿಸಿ ಎರಡಕ್ಕೂ ಹೊಂದಿಕೆಯಾಗುವಂತಹ 'ಕಾಮನ್ ಸ್ಮಾರ್ಟ್ ಕಾರ್ಡ್'ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಜೂನ್ ವೇಳೆಗೆ ಅಧಿಕೃತವಾಗಿ ವಿತರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿ ನಡುವೆ ಸಾರ್ವಜನಿಕ ಸಾರಿಗೆ ಅವಲಂಬಿಸಿರುವ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇನ್ಮುಂದೆ ಬಿಎಂಟಿಸಿ ಬಸ್ ಹಾಗೂ ನಮ್ಮ ಮೆಟ್ರೋದಲ್ಲಿ ಸಂಚರಿಸಲು ಪ್ರತ್ಯೇಕ ಟಿಕೆಟ್ ಅಥವಾ ಕಾರ್ಡ್‌ಗಳ ಅವಶ್ಯಕತೆ ಇರುವುದಿಲ್ಲ. "ಒಂದೇ ಕಾರ್ಡ್, ಎರಡೂ ಪ್ರಯಾಣ" ಎಂಬ ಅದ್ಭುತ ಸೌಲಭ್ಯ ಜೂನ್ ತಿಂಗಳಿನಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಜೂನ್ ವೇಳೆಗೆ ಸ್ಮಾರ್ಟ್ ಕಾರ್ಡ್ ವಿತರಣೆ

ಮೆಟ್ರೋ ಮತ್ತು ಬಿಎಂಟಿಸಿ ಎರಡಕ್ಕೂ ಹೊಂದಿಕೆಯಾಗುವಂತಹ 'ಕಾಮನ್ ಸ್ಮಾರ್ಟ್ ಕಾರ್ಡ್'ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಜೂನ್ ವೇಳೆಗೆ ಅಧಿಕೃತವಾಗಿ ವಿತರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಮೂಲಕ ಪ್ರಯಾಣಿಕರು ಮೆಟ್ರೋ ಕಾರ್ಡ್ ರೀ-ಚಾರ್ಜ್ ಮಾಡಿದಂತೆಯೇ ಈ ಕಾರ್ಡ್ ಅನ್ನು ರೀ-ಚಾರ್ಜ್ ಮಾಡಿ ಎರಡೂ ಸಾರಿಗೆಗಳಲ್ಲಿ ಬಳಸಬಹುದಾಗಿದೆ.

ಬರಲಿವೆ ಹೊಸ ಟಿಕೆಟ್ ಮಿಷನ್ (ETM)

ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಬಿಎಂಟಿಸಿ ಕಂಡಕ್ಟರ್‌ಗಳ ಕೈಗೆ ಹೊಸ ಮಾದರಿಯ ಟಿಕೆಟ್ ಮಿಷನ್‌ಗಳನ್ನು ನೀಡಲಾಗುವುದು. ಈ ಮಿಷನ್‌ಗಳು ಸ್ಮಾರ್ಟ್ ಕಾರ್ಡ್ ಸ್ವೈಪ್ ಮಾಡುವ ಸೌಲಭ್ಯವನ್ನು ಹೊಂದಿರುತ್ತವೆ. ಶೀಘ್ರದಲ್ಲೇ ಎಲ್ಲಾ ಡಿಪೋಗಳಿಗೆ ಈ ಮಿಷನ್‌ಗಳನ್ನು ವಿತರಿಸಲಾಗುವುದು ಮತ್ತು ಕಂಡಕ್ಟರ್‌ಗಳಿಗೆ ಇದನ್ನು ನಿರ್ವಹಿಸಲು ಅಗತ್ಯ ತರಬೇತಿಯನ್ನು ನೀಡಲಾಗುವುದು.

ಭ್ರಷ್ಟಾಚಾರಕ್ಕೆ ಬೀಳಲಿದೆ ಬ್ರೇಕ್!

ಇತ್ತೀಚೆಗೆ ಕ್ಯೂಆರ್ ಕೋಡ್ (QR Code) ಬಳಸಿ ಹಣ ವರ್ಗಾವಣೆ ಮಾಡುವಾಗ ನಡೆದಿದ್ದ ಅಕ್ರಮಗಳು ಮತ್ತು ಭ್ರಷ್ಟಾಚಾರದ ಪ್ರಕರಣಗಳು ಸಾರಿಗೆ ಇಲಾಖೆಗೆ ತಲೆನೋವಾಗಿದ್ದವು. ಈ ಹೊಸ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷನ್ (ETM) ಬಳಕೆಯಿಂದ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಬರಲಿದ್ದು, ಇಂತಹ ಅಕ್ರಮಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯ ಮುಖ್ಯಾಂಶಗಳು:

ಏಕರೂಪದ ಪ್ರಯಾಣ: ಮೆಟ್ರೋ ಕಾರ್ಡ್ ಮಾದರಿಯಲ್ಲೇ ಬಿಎಂಟಿಸಿ ಬಸ್‌ಗಳಲ್ಲೂ ಸಂಚಾರ ಸಾಧ್ಯ.

ಸಮಯ ಉಳಿತಾಯ: ಪ್ರತಿ ಬಾರಿ ಚಿಲ್ಲರೆ ಹಣಕ್ಕಾಗಿ ಅಥವಾ ಟಿಕೆಟ್‌ಗಾಗಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ಇರುವುದಿಲ್ಲ.

ಪಾರದರ್ಶಕತೆ: ಡಿಜಿಟಲ್ ಪಾವತಿಯಿಂದಾಗಿ ಟಿಕೆಟ್ ಹಗರಣಗಳಿಗೆ ಮುಕ್ತಿ.

ಸ್ವೈಪ್ ಸೌಲಭ್ಯ: ಕಂಡಕ್ಟರ್ ಬಳಿ ಇರುವ ಹೊಸ ಮಿಷನ್‌ನಲ್ಲಿ ಸುಲಭವಾಗಿ ಕಾರ್ಡ್ ಸ್ವೈಪ್ ಮಾಡಬಹುದು.

ಬೆಂಗಳೂರಿನ ಸಾರಿಗೆ ಇತಿಹಾಸದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಲಿದ್ದು, ಜನಸಾಮಾನ್ಯರ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.