ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹೈಟೆಕ್ ವಂಚನೆ ಬೆಳಕಿಗೆ ಬಂದಿದೆ. ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಪ್ರಕರಣ ಈಗ ಬೆಂಗಳೂರು ಸಿಸಿಬಿ ಪೊಲೀಸರ ಅಂಗಳ ತಲುಪಿದೆ.
ವಂಚನೆಯ ಜಾಲ ಹೇಗಿತ್ತು?
'ಕ್ರಿಸ್ಟಲ್ ಎಐ ರೋಬೊಟ್ ಟ್ರೇಡಿಂಗ್ ಫ್ಲಾಟ್ ಫ್ರಮ್' ಎಂಬ ಹೆಸರಿನಲ್ಲಿ ಈ ವಂಚನಾ ಜಾಲ ಕಳೆದ ಎರಡೂವರೆ ವರ್ಷಗಳಿಂದ ಸಕ್ರಿಯವಾಗಿತ್ತು. "ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಎಐ ರೋಬೋಟ್‌ಗಳು ಟ್ರೇಡಿಂಗ್ ನಡೆಸಿ ಕೇವಲ 200 ದಿನಗಳಲ್ಲಿ ನಿಮ್ಮ ಹಣವನ್ನು ದುಪ್ಪಟ್ಟು (Money Doubling) ಮಾಡಿಕೊಡುತ್ತವೆ" ಎಂಬ ಆಮಿಷವನ್ನು ಆರೋಪಿಗಳು ಹೂಡಿಕೆದಾರರಿಗೆ ಒಡ್ಡಿದ್ದರು.
ಆರೋಪಿಗಳ ವಿರುದ್ಧ ಕೇಸ್ ದಾಖಲು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ ಕಾಮತ್, ಮಧು ಮತ್ತು ನಾಗೇಶಪ್ಪ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ಬೆಂಗಳೂರಿನ ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ಸುಸಜ್ಜಿತ ಕಚೇರಿ ತೆರೆದು ಈ ದಂಧೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ, ಚೈನ್ ಲಿಂಕ್ ಮಾದರಿಯಲ್ಲಿ ಏಜೆಂಟ್‌ಗಳನ್ನು ನೇಮಿಸಿಕೊಂಡು ಸುಮಾರು 50 ಜನರ ತಂಡ ಈ ಜಾಲದಲ್ಲಿ ಕೆಲಸ ಮಾಡುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಕರಾವಳಿ ಭಾಗದವರೇ ಅತಿ ಹೆಚ್ಚು ಸಂತ್ರಸ್ತರು!
ರಾಜ್ಯದ ವಿವಿಧ ಭಾಗಗಳಲ್ಲದೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಂದಲೂ ಆರೋಪಿಗಳು ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಹಣ ಕಳೆದುಕೊಂಡವರಲ್ಲಿ ಬಹುಪಾಲು ಜನರು ದಕ್ಷಿಣ ಕನ್ನಡದ ಕರಾವಳಿ ಭಾಗದವರು ಎಂಬುದು ತಿಳಿದುಬಂದಿದೆ. ಹೆಚ್ಚಿನ ಲಾಭದ ಆಸೆಗೆ ಬಿದ್ದ ಸಾರ್ವಜನಿಕರು ಲಕ್ಷ ಲಕ್ಷ ರೂಪಾಯಿ ಹಣವನ್ನು ಈ ಕಂಪನಿಗೆ ಸುರಿದು ಈಗ ಕಂಗಾಲಾಗಿದ್ದಾರೆ.
ದುಬೈನಲ್ಲೂ ಹರಡಿತ್ತು ನೆಟ್‌ವರ್ಕ್!
ವಂಚನೆಯ ಜಾಲ ಕೇವಲ ಬೆಂಗಳೂರಿಗೆ ಸೀಮಿತವಾಗಿರಲಿಲ್ಲ. ಆರೋಪಿಗಳು ದುಬೈನಲ್ಲೂ ಕಚೇರಿ ತೆರೆದು ನೆಟ್‌ವರ್ಕ್ ಬ್ಯುಸಿನೆಸ್ ಹೆಸರಿನಲ್ಲಿ ಮೋಸ ಮಾಡುತ್ತಿದ್ದರು. ಸಿಸಿಬಿ ಪೊಲೀಸರು ಈ ಹಿಂದೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ:
ಪ್ರಸ್ತುತ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಹಣ ಡಬಲ್ ಮಾಡಿಕೊಡುವುದಾಗಿ ಹೇಳುವ ಕಂಪನಿಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಇಂತಹ ಆಮಿಷಗಳಿಗೆ ಬಲಿಯಾಗಬಾರದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.