Skip to main content
ವಿಡಿಯೋ
general

ಮಲ್ಲೇಶ್ವರಂನಲ್ಲಿ ಮರಗಳ ಮಾರಣಹೋಮ: ಅರಣ್ಯ ಇಲಾಖೆ ವಿರುದ್ಧ ನಟ ಜಗ್ಗೇಶ್ ಆಕ್ರೋಶ..!

By Bhavana Gowda
ಮಲ್ಲೇಶ್ವರಂನಲ್ಲಿ ಮರಗಳ ಮಾರಣಹೋಮ: ಅರಣ್ಯ ಇಲಾಖೆ ವಿರುದ್ಧ ನಟ ಜಗ್ಗೇಶ್ ಆಕ್ರೋಶ..!

ಜಗ್ಗೇಶ್ ಅವರು ತಮ್ಮ ಪೋಸ್ಟ್‌ನಲ್ಲಿ ಒಂದು ಗಂಭೀರ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. "ಇತ್ತೀಚೆಗೆ ಸೌದೆಯ ಬೆಲೆ ಏರಿಕೆಯಾಗಿದೆ. ಇದೇ ಕಾರಣಕ್ಕೆ ಏನಾದರೂ ಇಂತಹ ಚಂದದ ಮರಗಳನ್ನು ಕಡಿಯುತ್ತಿದ್ದಾರಾ?" ಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಉದ್ಯಾನ ನಗರಿ ಎಂಬ ಹೆಗ್ಗಳಿಕೆಗೆ ಇತ್ತೀಚಿನ ದಿನಗಳಲ್ಲಿ ಮರಗಳ ಮಾರಣಹೋಮ ಕೊಡಲಿ ಪೆಟ್ಟು ನೀಡುತ್ತಿದೆ. ಅಭಿವೃದ್ಧಿ ಅಥವಾ ಕ್ಷುಲ್ಲಕ ಕಾರಣಗಳಿಗಾಗಿ ಮರಗಳನ್ನು ಕಡಿಯುತ್ತಿರುವುದನ್ನು ಕಂಡು ಹಿರಿಯ ನಟ ಜಗ್ಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಕಾಡು ಮಲ್ಲೇಶ್ವರದ ಮರಗಳಿಗೆ ಕುತ್ತು?

"ನಮ್ಮ ಬಡಾವಣೆಯ ಹೆಸರು ಕಾಡು ಮಲ್ಲೇಶ್ವರ. ಅಂದರೆ ಅದು ಮರಗಳ ಸಾಲಿನಿಂದ ಕೂಡಿದ ಸುಂದರ ಪ್ರದೇಶ. ಆದರೆ ಇಂದು ಅರಣ್ಯ ಇಲಾಖೆಯವರು ಕ್ಷುಲ್ಲಕ ಕಾರಣಗಳನ್ನು ನೀಡಿ ಮುಗಿಲೆತ್ತರದ ಮರಗಳನ್ನು ಕರುಣೆಯಿಲ್ಲದೆ ಕಡಿಯುತ್ತಿದ್ದಾರೆ," ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಕ್ಷುಲ್ಲಕ ಕಾರಣಗಳಿಗೆ ಕೊಡಲಿ ಪೆಟ್ಟು!

ಮರಗಳನ್ನು ಕಡಿಯಲು ನೀಡಲಾಗುತ್ತಿರುವ ಕಾರಣಗಳ ಬಗ್ಗೆ ಕಿಡಿಕಾರಿದ ನವರಸ ನಾಯಕ, ಜನರು ನೀಡುವ ಸಣ್ಣಪುಟ್ಟ ದೂರುಗಳಿಗೆ ಮರವನ್ನೇ ತೆರವುಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಕಾರು ನಿಲ್ಲಿಸಲು ಜಾಗವಿಲ್ಲ ಎಂಬ ಕಾರಣಕ್ಕೆ ಮರ ಕಡಿಯಲಾಗುತ್ತಿದೆ.

ಎಲೆ ಉದುರುತ್ತದೆ, ಕಂಬಳಿ ಹುಳು ಬರುತ್ತದೆ ಎಂಬ ಆಕ್ಷೇಪಕ್ಕೆ ಮರ ಬಲಿ ಕೊಡಲಾಗುತ್ತಿದೆ.

ಮನೆಗೆ ಬಿಸಿಲು ಬೀಳುತ್ತಿಲ್ಲ ಎಂದು ಯಾರಾದರೂ ಮನವಿ ಕೊಟ್ಟರೆ ಸಾಕು, ಅರಣ್ಯ ಇಲಾಖೆ ಮರವನ್ನೇ ಕಡಿದು ಹಾಕುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಸೌದೆ ಬೆಲೆ ಏರಿದ್ದಕ್ಕೆ ಈ ಕೃತ್ಯವೇ?

ಜಗ್ಗೇಶ್ ಅವರು ತಮ್ಮ ಪೋಸ್ಟ್‌ನಲ್ಲಿ ಒಂದು ಗಂಭೀರ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. "ಇತ್ತೀಚೆಗೆ ಸೌದೆಯ ಬೆಲೆ ಏರಿಕೆಯಾಗಿದೆ. ಇದೇ ಕಾರಣಕ್ಕೆ ಏನಾದರೂ ಇಂತಹ ಚಂದದ ಮರಗಳನ್ನು ಕಡಿಯುತ್ತಿದ್ದಾರಾ?" ಎಂದು ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಕಣ್ಣೆದುರೇ ಒಂಬತ್ತು ಮುಗಿಲೆತ್ತರದ ಮರಗಳನ್ನು ಕಡಿಯಲಾಗಿದೆ ಮತ್ತು ತಾವು 25 ವರ್ಷಗಳಿಂದ ಬೆಳೆಸಿದ್ದ 150 ಮರಗಳ ಮೇಲೆ ಕೊಡಲಿ ಹಾಕಲು ಪ್ರಯತ್ನಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ ತಾವು ಪ್ರತಿಭಟಿಸಿ ಆ ಮರಗಳನ್ನು ಉಳಿಸಿರುವುದಾಗಿ ಹೇಳಿದ್ದಾರೆ.

ಅರಣ್ಯ ಇಲಾಖೆಗೆ ಮನವಿ

"ದಯವಿಟ್ಟು ಅರಣ್ಯ ಇಲಾಖೆಯು ಕೇವಲ ಅಪಾಯಕಾರಿ ಮರಗಳನ್ನು ಗುರುತಿಸಿ, ಅವುಗಳ ಕೊಂಬೆಗಳನ್ನು ಮಾತ್ರ ತೆಗೆಯಲು ಆದೇಶಿಸಲಿ. ಆದರೆ ಇಲ್ಲಿ ಪುಣ್ಯಾತ್ಮರು ಬಂದರೆ ಕೊಂಬೆ ಬದಲಿಗೆ ಇಡೀ ಮರವನ್ನೇ ತೆರವು ಮಾಡಿ ಹೋಗುತ್ತಾರೆ. ಇರುವ ಮರಗಳನ್ನು ಉಳಿಸುವ ಕಾರ್ಯ ಮೊದಲು ಮಾಡಿ," ಎಂದು ಅವರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ನಟ ಜಗ್ಗೇಶ್ ಅವರ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಪರಿಸರ ಪ್ರೇಮಿಗಳು ಜಗ್ಗೇಶ್ ಅವರ ನಿಲುವನ್ನು ಬೆಂಬಲಿಸುತ್ತಿದ್ದಾರೆ.