Skip to main content
ವಿಡಿಯೋ
politics

ಸಿಎಂ ಬದಲಾವಣೆ ಚರ್ಚೆ: ಹೈಕಮಾಂಡ್ ಅಂಗಳಕ್ಕೆ ಬಾಲ್ ಎಸೆದ ಜಿ. ಪರಮೇಶ್ವರ್! 'ದಲಿತ ಸಿಎಂ' ಕೂಗಿನ ಬಗ್ಗೆ ಗೃಹ ಸಚಿವರು ಹೇಳಿದ್ದೇನು..?

By Bhavana Gowda
ಸಿಎಂ ಬದಲಾವಣೆ ಚರ್ಚೆ: ಹೈಕಮಾಂಡ್ ಅಂಗಳಕ್ಕೆ ಬಾಲ್ ಎಸೆದ ಜಿ. ಪರಮೇಶ್ವರ್! 'ದಲಿತ ಸಿಎಂ' ಕೂಗಿನ ಬಗ್ಗೆ ಗೃಹ ಸಚಿವರು ಹೇಳಿದ್ದೇನು..?

ಈ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಮುನ್ಸೂಚನೆ ನೀಡುತ್ತಿವೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಕಲಬುರಗಿ: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಸಂಚಲನ ಮೂಡಿಸುತ್ತಿರುವ 'ಮುಖ್ಯಮಂತ್ರಿ ಬದಲಾವಣೆ' ಹಾಗೂ 'ದಲಿತ ಸಿಎಂ' ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸ್ಫೋಟಕ ಪ್ರತಿಕ್ರಿಯೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಎಲ್ಲಾ ಗೊಂದಲಗಳಿಗೆ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ತೆರೆ ಎಳೆಯಲಿದೆ ಎಂಬ ಸುಳಿವು ನೀಡಿದ್ದಾರೆ.

ಹೈಕಮಾಂಡ್ ನಿರ್ಧಾರವೇ ಅಂತಿಮ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, "ಎಲ್ಲದಕ್ಕೂ ಆದಷ್ಟು ಶೀಘ್ರದಲ್ಲಿ ನಮ್ಮ ಹೈಕಮಾಂಡ್ ಉತ್ತರ ಕೊಡಲಿದೆ. ಪಕ್ಷದಲ್ಲಿ ಅಧಿಕಾರ ಬದಲಾವಣೆ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮತ್ತು ನಾಯಕ ಬದ್ಧನಾಗಿರುತ್ತಾನೆ," ಎಂದು ಮಾರ್ಮಿಕವಾಗಿ ನುಡಿದರು.

'ದಲಿತ ಸಿಎಂ' ಜನಾಭಿಪ್ರಾಯ ಎಂದ ಸಚಿವರು

ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ 'ದಲಿತ ಸಿಎಂ' ಕೂಗಿನ ಬಗ್ಗೆ ಮಾತನಾಡಿದ ಅವರು, "ಇದು ಕೇವಲ ಜನಾಭಿಪ್ರಾಯ. ಜನರು ಪ್ರೀತಿ ಮತ್ತು ವಿಶ್ವಾಸದಿಂದ ಇಂತಹ ಬೇಡಿಕೆಗಳನ್ನು ಇಡುತ್ತಾರೆ. ನಮ್ಮ ಪಕ್ಷದ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನವನ್ನು ಅವರೇ ಕೈಗೊಳ್ಳುತ್ತಾರೆ," ಎಂದರು.

ಸಿದ್ದರಾಮಯ್ಯ 5 ವರ್ಷ ಇರ್ತಾರಾ? ಮೌನಕ್ಕೆ ಶರಣಾದ ಪರಮೇಶ್ವರ್!

"ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯುತ್ತಾರೆ" ಎಂಬ ಅವರ ಇತ್ತೀಚಿನ ಹೇಳಿಕೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಗೃಹ ಸಚಿವರು ಉತ್ತರ ನೀಡಲು ನಿರಾಕರಿಸಿದರು. ಇದು ರಾಜಕೀಯ ವಲಯದಲ್ಲಿ ಹಲವು ಅರ್ಥಗಳಿಗೆ ಎಡೆಮಾಡಿಕೊಟ್ಟಿದೆ.

ಡಿಕೆಶಿಗೆ ಬರ್ತ್‌ಡೇ ಗಿಫ್ಟ್ ಸಿಗುತ್ತಾ?

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನದ 'ಬರ್ತ್‌ಡೇ ಗಿಫ್ಟ್' ಸಿಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ ನಾವು ಅದಕ್ಕೆ ಒಪ್ಪಿಕೊಳ್ಳುತ್ತೇವೆ. ಸದ್ಯಕ್ಕೆ ಸರ್ಕಾರ ಜನರಿಗೆ ಕೊಟ್ಟ ಭರವಸೆಯಂತೆ ಕೆಲಸ ಮಾಡುತ್ತಿದೆ. 4 ಲಕ್ಷ ಕೋಟಿ ರೂ. ಬಜೆಟ್ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುತ್ತಿವೆ," ಎಂದು ಸ್ಪಷ್ಟಪಡಿಸಿದರು. ಈ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಮುನ್ಸೂಚನೆ ನೀಡುತ್ತಿವೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.