ಶಿವಮೊಗ್ಗ: ಜಿಲ್ಲೆಯ ಸೊರಬ ಪಟ್ಟಣದಲ್ಲಿ ಬಿಜೆಪಿ ಮುಖಂಡನ ಪತ್ನಿಯೊಬ್ಬರು ನೇಣಿಗೆ ಶರಣಾದ ಬೆನ್ನಲ್ಲೇ, ಪತಿಯ ಕಿರುಕುಳವೇ ಸಾವಿಗೆ ಕಾರಣ ಎಂಬ ಆರೋಪದ ಮೇಲೆ ಪೊಲೀಸರು ಪ್ರಮುಖ ಬಿಜೆಪಿ ಮುಖಂಡನನ್ನು ಬಂಧಿಸಿದ್ದಾರೆ. ಸೊರಬ ಪುರಸಭೆಯ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿ ಈಗ ಜೈಲು ಪಾಲಾದವರು.
ಘಟನೆಯ ಹಿನ್ನೆಲೆ:
ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಕಳೆದ ಭಾನುವಾರ ಮಂಜುಳಾ (38) ಎಂಬುವವರು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಮೃತ ಮಂಜುಳಾ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದವರಾಗಿದ್ದಾರೆ. ಇವರು ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಅವರ ಎರಡನೇ ಪತ್ನಿಯಾಗಿದ್ದರು.
ಪತಿಯ ಅಕ್ರಮ ಸಂಬಂಧವೇ ಸಾವಿಗೆ ಕಾರಣ?
ಕುಟುಂಬಸ್ಥರ ಆರೋಪದ ಪ್ರಕಾರ, ಪ್ರಭು ಮೇಸ್ತ್ರಿ 2024ರಲ್ಲಿ ಮಂಜುಳಾ ಅವರನ್ನು ಎರಡನೇ ಮದುವೆಯಾಗಿದ್ದರು. ಆದರೆ ಮದುವೆಯಾದ ನಂತರವೂ ಪ್ರಭು ಮೇಸ್ತ್ರಿ ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಒಡನಾಟ ಹೊಂದಿದ್ದರು ಎನ್ನಲಾಗಿದೆ. ಈ ವಿಷಯವಾಗಿ ದಂಪತಿಗಳ ನಡುವೆ ಜಗಳವಾಗುತ್ತಿತ್ತು. ಈ ಹಿಂದೆ ರಾಜೀ ಪಂಚಾಯಿತಿ ಮಾಡಲಾಗಿದ್ದರೂ ಸಹ, ಪ್ರಭು ಮೇಸ್ತ್ರಿ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದರು ಎನ್ನಲಾಗಿದೆ.
ತಾಯಿ ನೀಡಿದ ದೂರಿನಿಂದ ಸಂಕಷ್ಟ:
ತನ್ನ ಮಗಳ ಸಾವಿಗೆ ಅಳಿಯ ಪ್ರಭು ಮೇಸ್ತ್ರಿ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳವೇ ಕಾರಣ ಎಂದು ಮಂಜುಳಾ ಅವರ ತಾಯಿ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗಳ ಸಂಸಾರದಲ್ಲಿ ಅಕ್ರಮ ಸಂಬಂಧದ ಕಿಚ್ಚು ಹಚ್ಚಿ, ಅವಳ ಸಾವಿಗೆ ಪ್ರೇರೇಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಪೊಲೀಸ್ ಕಾರ್ಯಾಚರಣೆ ಮತ್ತು ಬಂಧನ:
ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಸೊರಬ ಪೊಲೀಸರು, ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಪ್ರಭು ಮೇಸ್ತ್ರಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹಾರ್ಡ್‌ವೇರ್ ಉದ್ಯಮದ ಜೊತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಮುಖಂಡನ ಬಂಧನ ಸೊರಬ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಂಸಾರದ ಕಲಹ ಮತ್ತು ಅಕ್ರಮ ಸಂಬಂಧದ ಆರೋಪವು ಒಂದು ಜೀವವನ್ನು ಬಲಿಪಡೆದಿದ್ದು, ಕಾನೂನು ತನ್ನ ಕ್ರಮ ಮುಂದುವರಿಸಿದೆ.