ರಾಮನಗರ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಹಾಗೂ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಕುರಿತು ರಾಮನಗರದಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಮಹತ್ವದ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಮೊಂಡುಹಠ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಮೇ 9ಕ್ಕೆ ಬಂಗಾಳದಲ್ಲಿ ಬಿಜೆಪಿ ಮುಖ್ಯಮಂತ್ರಿ ಪಟ್ಟಾಭಿಷೇಕ!
ಪಶ್ಚಿಮ ಬಂಗಾಳದ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ ಸಂಸದರು, "ಅಲ್ಲಿನ ವಿಧಾನಸಭೆಯ ಅವಧಿ ಮುಕ್ತಾಯಗೊಂಡಿದೆ. ನಿಯಮದಂತೆ ಅವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯಪಾಲರು ಆಟೋಮ್ಯಾಟಿಕ್ ಆಗಿ ಕ್ರಮ ವಹಿಸುತ್ತಾರೆ. ಮೇ 9ರಂದು ಬೆಳಗ್ಗೆ 11 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ," ಎಂದು ತಿಳಿಸಿದರು. ಚುನಾವಣೆಯಲ್ಲಿ ತೊಂದರೆಯಾಗಿದ್ದರೆ ಕೋರ್ಟ್ ಮೊರೆ ಹೋಗಬೇಕೇ ಹೊರತು, ಈ ರೀತಿ ಮೊಂಡುಹಠ ಮಾಡುವುದು ಸರಿಯಲ್ಲ ಎಂದು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.
ಟಿಎಂಸಿ ಹಿಂಸಾಚಾರ ಖಂಡನೀಯ: 6 ತಿಂಗಳು ಸಿಆರ್‌ಪಿಎಫ್ ಕಾವಲು
ಸುವೇಂದು ಅಧಿಕಾರಿ ಅವರ ಪಿಎ ಕೊಲೆ ಪ್ರಕರಣವನ್ನು ಖಂಡಿಸಿದ ಅವರು, ಬಂಗಾಳದಲ್ಲಿ ಇದುವರೆಗೆ 400ಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ. "ಸೋತ ಮೇಲೂ ಟಿಎಂಸಿ ಹಿಂಸಾಚಾರ ಮಾಡುತ್ತಿರುವುದು ಸಂವಿಧಾನ ವಿರೋಧಿ ಧೋರಣೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೂ ಮುನ್ನೆಚ್ಚರಿಕಾ ಕ್ರಮವಾಗಿ ಆರು ತಿಂಗಳ ಕಾಲ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿದೆ. ಇನ್ಮುಂದೆ ಬಂಗಾಳದಲ್ಲಿ ಹೊಸ ಅಧ್ಯಾಯ ಶುರುವಾಗಲಿದೆ," ಎಂದರು.
ಮೇ 10ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿಯ ಬಗ್ಗೆ ಮಾಹಿತಿ ನೀಡಿದ ಸಂಸದರು, "ಮೇ 10ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೊದಲು ಹೆಚ್‌ಎಎಲ್‌ನಲ್ಲಿ (HAL) ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಅಲ್ಲಿ ರಾಜ್ಯ ಬಿಜೆಪಿಯಿಂದ ಅವರಿಗೆ ಅದ್ಧೂರಿ ಅಭಿನಂದನೆ ಸಲ್ಲಿಸಲಾಗುವುದು. ನಂತರ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ತೆರಳಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ," ಎಂದು ತಿಳಿಸಿದರು.