ಬೆಂಗಳೂರು: ಇರಾನ್-ಅಮೆರಿಕಾ ಸಂಘರ್ಷದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬಿಕ್ಕಟ್ಟು ಎದುರಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ನೀಡಿರುವ ‘ಮಿತವ್ಯಯ’ದ ಸಂದೇಶ ಈಗ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದೆ. ಸಾರ್ವಜನಿಕ ಸಾರಿಗೆ ಬಳಕೆ, ಅಡುಗೆ ತೈಲದ ಮಿತ ಬಳಕೆ ಮತ್ತು ಚಿನ್ನ ಖರೀದಿ ಬೇಡ ಎಂಬ ಮೋದಿಯವರ ಎಂಟು ಸಲಹೆಗಳನ್ನು ಕಾಂಗ್ರೆಸ್ ಲೇವಡಿ ಮಾಡುತ್ತಿದ್ದರೆ, ಬಿಜೆಪಿ ನಾಯಕರು ಇತಿಹಾಸದ ದಾಖಲೆಗಳನ್ನು ಕೆದಕಿ ತಿರುಗೇಟು ನೀಡುತ್ತಿದ್ದಾರೆ.
ಕಾಂಗ್ರೆಸ್ ಟೀಕೆಗೆ ಹಳೆ ವಿಡಿಯೋಗಳೇ ಅಸ್ತ್ರ!
ಕಾಂಗ್ರೆಸ್ ನಾಯಕರು ಮೋದಿಯವರ ಸಲಹೆಗಳನ್ನು ಟೀಕಿಸುತ್ತಿದ್ದಂತೆ, ಬಿಜೆಪಿ ನಾಯಕರು ಕಾಂಗ್ರೆಸ್ ಆಡಳಿತವಿದ್ದಾಗ ನೀಡಲಾಗಿದ್ದ ಮಿತವ್ಯಯದ ಸಲಹೆಗಳ ವಿಡಿಯೋ ಮತ್ತು ಪತ್ರಿಕಾ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಪ್ರಧಾನಿಯವರ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ವೀರಪ್ಪ ಮೊಯಿಲಿ ವಿಡಿಯೋ ವೈರಲ್: 2013ರಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ವೀರಪ್ಪ ಮೊಯಿಲಿ ಅವರು ಪೆಟ್ರೋಲ್ ಉಳಿಸಲು ರಾತ್ರಿ 8 ಗಂಟೆಯ ನಂತರ ಬಂಕ್‌ಗಳನ್ನು ಮುಚ್ಚುವ ಬಗ್ಗೆ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಂಚಿಕೊಂಡಿದ್ದಾರೆ. ಅಂದು ಮೊಯಿಲಿ ಅವರು ಅನಗತ್ಯ ಓಡಾಟ ಕಡಿಮೆ ಮಾಡಿ, ಮನೆಯಲ್ಲಿ ಮೂರು ಕಾರುಗಳಿದ್ದರೆ ಒಂದನ್ನಷ್ಟೇ ಬಳಸಿ ಎಂದು ಮನವಿ ಮಾಡಿದ್ದರು.
ಆರ್. ಅಶೋಕ್ ವಾಗ್ದಾಳಿ: ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟ್ವೀಟ್ ಮಾಡಿ, ಕಾಂಗ್ರೆಸ್ಸಿಗರ ಆರ್ಥಿಕ ಅಜ್ಞಾನವನ್ನು ಟೀಕಿಸಿದ್ದಾರೆ. "ರಾಷ್ಟ್ರ ಹಿತದೃಷ್ಟಿಯಿಂದ ಮೋದಿ ಅವರು ನೀಡುವ ಸಲಹೆಗಳನ್ನು ವಿರೋಧಿಸುವ ಕಾಂಗ್ರೆಸ್ಸಿಗರು ಒಮ್ಮೆ ತಮ್ಮದೇ ಇತಿಹಾಸವನ್ನು ತಿರುವಿ ಹಾಕಲಿ" ಎಂದು ಕಿಡಿಕಾರಿದ್ದಾರೆ.
ಇತಿಹಾಸದ ಪುಟಗಳಿಂದ: ಇಂದಿರಾ ಗಾಂಧಿ ಮತ್ತು ಚಿದಂಬರಂ ಮನವಿ
ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಿಗೆ ಅವರದ್ದೇ ಪಕ್ಷದ ನಾಯಕರ ಹಳೆಯ ನಿರ್ಧಾರಗಳನ್ನು ನೆನಪಿಸಿದ್ದಾರೆ:
1967ರ ಇಂದಿರಾ ಗಾಂಧಿ ಮನವಿ: ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ 'ಚಿನ್ನ ಕೊಳ್ಳಬೇಡಿ' ಎಂದು ಜನರಲ್ಲಿ ಮನವಿ ಮಾಡಿದ್ದರು.
2013ರ ಚಿದಂಬರಂ ಹೇಳಿಕೆ: ಯುಪಿಎ ಸರ್ಕಾರವಿದ್ದಾಗ ಹಣಕಾಸು ಸಚಿವ ಪಿ. ಚಿದಂಬರಂ ಅವರು ಚಾಲ್ತಿ ಖಾತೆ ಕೊರತೆ (CAD) ಸರಿದೂಗಿಸಲು 'ಚಿನ್ನದ ಮೇಲಿನ ವ್ಯಾಮೋಹ ಬಿಡಿ' ಎಂದು ಪದೇ ಪದೇ ಹೇಳಿದ್ದರು.
ಡಿಕೆಶಿ ತಿರುಗೇಟು: ‘ಮೊದಲು ನೀವು ಪಾಲನೆ ಮಾಡಿ’
ಮೋದಿಯವರ ಸಲಹೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, "ಮದುವೆ-ಮುಂಜಿ ಮಾಡುವವರು ಚಿನ್ನ ಖರೀದಿ ಮಾಡಬೇಡಿ ಎನ್ನಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರು ತಾಳಿ, ಸರ ಹಾಕಿಕೊಳ್ಳುವುದನ್ನು ಬೇಡ ಎನ್ನಲಾಗುತ್ತದೆಯೇ ಎಂದು ಕೇಳಿರುವ ಅವರು, ಜನರ ಮೇಲೆ ಮಿತವ್ಯಯ ಹೇರುವ ಮೊದಲು ಕೇಂದ್ರ ಸಚಿವರು ಮತ್ತು ಬಿಜೆಪಿ ಶಾಸಕರು ಸಾರ್ವಜನಿಕ ಸಾರಿಗೆ ಬಳಸಿ ಮಾದರಿಯಾಗಲಿ ಎಂದು ಸವಾಲು ಹಾಕಿದ್ದಾರೆ.
ಇಂದಿರಾ ಗಾಂಧಿ ಮತ್ತು ಚಿನ್ನದ ನಂಟು: ಅಂದು ನಡೆದಿದ್ದೇನು?
ಮಾದ್ಯಮಗಳ ವರದಿಯ ಪ್ರಕಾರ, ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಯುದ್ಧದ ಸಂಕಷ್ಟದ ಸಮಯದಲ್ಲಿ ತಮ್ಮ 367 ಗ್ರಾಂ ಚಿನ್ನಾಭರಣಗಳನ್ನು ರಾಷ್ಟ್ರೀಯ ಪರಿಹಾರ ನಿಧಿಗೆ ದಾನ ಮಾಡಿದ್ದರು. ಅಲ್ಲದೆ, 1991ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು 47 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಅಡವಿಟ್ಟಿದ್ದ ಇತಿಹಾಸವನ್ನೂ ವರದಿಗಳು ಉಲ್ಲೇಖಿಸಿವೆ. ಪ್ರಧಾನಿ ಮೋದಿ ಅವರ ಮಿತವ್ಯಯದ ಮಂತ್ರವು ಸದ್ಯಕ್ಕೆ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.