Skip to main content
ವಿಡಿಯೋ
politics

ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ: ಇಬ್ಬಾಗವಾದ ಎಐಎಡಿಎಂಕೆ; ಸಿಎಂ ವಿಜಯ್ ಪರ ನಿಂತ 30 ಬಂಡಾಯ ಶಾಸಕರು..!

By Bhavana Gowda
ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ: ಇಬ್ಬಾಗವಾದ ಎಐಎಡಿಎಂಕೆ; ಸಿಎಂ ವಿಜಯ್ ಪರ ನಿಂತ 30 ಬಂಡಾಯ ಶಾಸಕರು..!

ಈ 30 ಶಾಸಕರ ಬೆಂಬಲದೊಂದಿಗೆ ವಿಜಯ್ ಅವರು 118ರ ಸಂಖ್ಯಾಬಲವನ್ನು ಸುಲಭವಾಗಿ ದಾಟಿದ್ದು, ವಿಶ್ವಾಸಮತ ಗೆಲ್ಲುವುದು ಈಗ ಬಹುತೇಕ ಖಚಿತವಾಗಿದೆ.

ಚೆನ್ನೈ: ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಇಂದು ಅತ್ಯಂತ ಸಂಘರ್ಷಮಯ ದಿನಕ್ಕೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುತ್ತಿರುವ ಸಂದರ್ಭದಲ್ಲಿ, ಪ್ರಬಲ ವಿರೋಧ ಪಕ್ಷವಾದ ಎಐಎಡಿಎಂಕೆ (AIADMK) ಅಧಿಕೃತವಾಗಿ ಇಬ್ಬಾಗವಾಗಿದೆ. ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಧಿಕ್ಕರಿಸಿ 30 ಶಾಸಕರು ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.

ಪಳನಿಸ್ವಾಮಿ ಎಚ್ಚರಿಕೆ ಧಿಕ್ಕರಿಸಿದ ಶಾಸಕರು

ಸದನ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS), "ನಮ್ಮ ಪಕ್ಷವು ಯಾವುದೇ ಕಾರಣಕ್ಕೂ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ. ನಮ್ಮ ಎಲ್ಲಾ ಶಾಸಕರು ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸಬೇಕು" ಎಂದು ಕಡಕ್ ಸೂಚನೆ ನೀಡಿದರು. ಆದರೆ, ಪಳನಿಸ್ವಾಮಿ ಅವರ ಈ ಹೇಳಿಕೆಗೆ ಸದನದಲ್ಲೇ ತೀವ್ರ ಆಕ್ರೋಶ ವ್ಯಕ್ತವಾಯಿತು. ಎಐಎಡಿಎಂಕೆಯ ಹಿರಿಯ ನಾಯಕ ಎಸ್.ಪಿ. ವೇಲುಮಣಿ ನೇತೃತ್ವದ ಶಾಸಕರ ಗುಂಪು ಪಳನಿಸ್ವಾಮಿ ವಿರುದ್ಧ ಘೋಷಣೆ ಕೂಗಿತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಜೆ.ಸಿ.ಡಿ. ಪ್ರಭಾಕರ್, ಮಾತನಾಡಲು ವೇಲುಮಣಿ ಅವರಿಗೆ ಅವಕಾಶ ನೀಡಿದರು.

ವೇಲುಮಣಿ ಆವೇಶಭರಿತ ಭಾಷಣ; ಪಳನಿಸ್ವಾಮಿ ವಿರುದ್ಧ ವಾಗ್ದಾಳಿ

ಸ್ಪೀಕರ್ ಸೂಚನೆಯಂತೆ ಮಾತನಾಡಿದ ವೇಲುಮಣಿ, ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. "ನಾವು ಕಳೆದ 30 ವರ್ಷಗಳಿಂದ ಡಿಎಂಕೆ ವಿರುದ್ಧ ರಾಜಕೀಯ ಮಾಡುತ್ತಾ ಬಂದಿದ್ದೇವೆ. ತಮಿಳುನಾಡು ಜನರು ಈ ಬಾರಿ ಬದಲಾವಣೆ ಬಯಸಿ ವಿಜಯ್ ಅವರಿಗೆ ಅವಕಾಶ ನೀಡಿದ್ದಾರೆ. ಜನರ ತೀರ್ಪನ್ನು ನಾವು ಗೌರವಿಸಬೇಕು" ಎಂದರು. ಮುಂದುವರಿದು ಮಾತನಾಡಿದ ಅವರು, "ನಾವು ಯಾವುದೇ ಅಧಿಕಾರ ಅಥವಾ ಮಂತ್ರಿಗಿರಿಗಾಗಿ ವಿಜಯ್ ಅವರಿಗೆ ಬೆಂಬಲ ನೀಡುತ್ತಿಲ್ಲ. ರಾಜ್ಯದ ಅಭಿವೃದ್ಧಿ ಮತ್ತು ಡಿಎಂಕೆಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ನಾವು 30 ಶಾಸಕರು ವಿಜಯ್ ಅವರ ಪರವಾಗಿ ನಿಲ್ಲುತ್ತಿದ್ದೇವೆ" ಎಂದು ಘೋಷಿಸಿದರು.

ಸದನದಲ್ಲಿನ ಬಲಾಬಲ; ವಿಜಯ್ ಗೆಲುವಿನ ಹಾದಿ ಸುಗಮ

ವೇಲುಮಣಿ ಅವರ ಈ ಘೋಷಣೆಯಿಂದ ಎಐಎಡಿಎಂಕೆ ಪಾಳಯದಲ್ಲಿ ಸ್ಮಶಾನ ಮೌನ ಆವರಿಸಿದರೆ, ಟಿವಿಕೆ ಶಾಸಕರು ಮೇಜು ಕುಟ್ಟಿ ಈ ನಿರ್ಧಾರವನ್ನು ಸ್ವಾಗತಿಸಿದರು.

ಬಂಡಾಯ ಶಾಸಕರ ಸಂಖ್ಯೆ: 30

ಈ 30 ಶಾಸಕರ ಬೆಂಬಲದೊಂದಿಗೆ ವಿಜಯ್ ಅವರು 118ರ ಸಂಖ್ಯಾಬಲವನ್ನು ಸುಲಭವಾಗಿ ದಾಟಿದ್ದು, ವಿಶ್ವಾಸಮತ ಗೆಲ್ಲುವುದು ಈಗ ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆಯಿಂದಾಗಿ ಎಐಎಡಿಎಂಕೆ ಪಕ್ಷದಲ್ಲಿ ಬಿರುಕು ಮೂಡಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.