Skip to main content
ವಿಡಿಯೋ
crime

ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ಹಣ ದರೋಡೆ; ಕೆಲವೇ ಗಂಟೆಗಳಲ್ಲಿ ಸಂಬಂಧಿ ಸೇರಿ ನಾಲ್ವರ ಬಂಧನ..!

By Bhavana Gowda
ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ಹಣ ದರೋಡೆ; ಕೆಲವೇ ಗಂಟೆಗಳಲ್ಲಿ ಸಂಬಂಧಿ ಸೇರಿ ನಾಲ್ವರ ಬಂಧನ..!

ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸಂಬಂಧಿಯೇ ಹಣಕ್ಕಾಗಿ ದರೋಡೆಗೆ ಸಂಚು ರೂಪಿಸಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಸಿನಿಮಾ ಮಾದರಿಯ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾರು ಖರೀದಿಸಲು ಹೋಗುತ್ತಿದ್ದ ವ್ಯಕ್ತಿಯ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರ ತೋರಿಸಿ 7.5 ಲಕ್ಷ ರೂಪಾಯಿ ದರೋಡೆ ಮಾಡಿದ್ದ ಕಿಡಿಗೇಡಿಗಳನ್ನು ಪೊಲೀಸರು ಕೇವಲ ಎರಡೇ ಗಂಟೆಗಳಲ್ಲಿ ಜೈಲಿಗಟ್ಟಿದ್ದಾರೆ.

ಘಟನೆಯ ವಿವರ:

ಗೌರಿಬಿದನೂರಿನ ವಿನಾಯಕ ಬಡಾವಣೆ ನಿವಾಸಿ ಶಿವಶಂಕರ್ ಆರಾಧ್ಯ ಅವರು ಕಾರು ಖರೀದಿಸುವ ಉದ್ದೇಶದಿಂದ 7.5 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಶಿವಶಂಕರ್ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ತೋರಿಸಿ ಬೆದರಿಸಿ ಹಣದೊಂದಿಗೆ ಪರಾರಿಯಾಗಿದ್ದರು.

ಸಂಬಂಧಿಯಿಂದಲೇ ದರೋಡೆಗೆ ಸ್ಕೆಚ್:

ಈ ದರೋಡೆಯ ಹಿಂದೆ ಶಿವಶಂಕರ್ ಆರಾಧ್ಯ ಅವರ ಸಂಬಂಧಿ ಯಶ್ವಂತ್ ಆರಾಧ್ಯ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. "ಕಾರು ಖರೀದಿಸಿದರೆ ಹೆಚ್ಚು ಲಾಭ ಸಿಗುತ್ತದೆ" ಎಂದು ಶಿವಶಂಕರ್ ಅವರಿಗೆ ನಂಬಿಸಿದ್ದ ಯಶ್ವಂತ್, ಅವರು ಹಣದೊಂದಿಗೆ ಬರುವ ವಿಚಾರವನ್ನು ತನ್ನ ಸ್ನೇಹಿತರಿಗೆ ಮುಟ್ಟಿಸಿದ್ದನು. ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ದರೋಡೆಗೆ ಪ್ಲಾನ್ ಮಾಡಿದ್ದನು.

ಖಾಕಿ ಬಲೆಗೆ ಬಿದ್ದ ಆರೋಪಿಗಳು:

ದರೋಡೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಗೌರಿಬಿದನೂರು ನಗರ ಠಾಣೆಯ ಪಿಎಸ್ಐ ಲಲಿತಮ್ಮ ಹಾಗೂ ಸಿಬ್ಬಂದಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು: ಯಶ್ವಂತ್ ಆರಾಧ್ಯ, ಭರತ್, ದರ್ಶನ್ ಮತ್ತು ವಿಷಕಂಠ.

ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸಂಬಂಧಿಯೇ ಹಣಕ್ಕಾಗಿ ದರೋಡೆಗೆ ಸಂಚು ರೂಪಿಸಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.