Skip to main content
ವಿಡಿಯೋ
webstory

ಧರ್ಮಸ್ಥಳ SIT ಕಾರ್ಯಾಚರಣೆ: ಬೆವರು ಸುರಿಸಿದವರಿಗೆ ಬಿಲ್ ಬಾಕಿ; ಒಂಬತ್ತು ತಿಂಗಳಿನಿಂದ ಕೂಲಿಕಾರ್ಮಿಕರು, ಜೆಸಿಬಿ ಮಾಲಕರ ಅಲೆದಾಟ..!

By Bhavana Gowda
ಧರ್ಮಸ್ಥಳ SIT ಕಾರ್ಯಾಚರಣೆ: ಬೆವರು ಸುರಿಸಿದವರಿಗೆ ಬಿಲ್ ಬಾಕಿ; ಒಂಬತ್ತು ತಿಂಗಳಿನಿಂದ ಕೂಲಿಕಾರ್ಮಿಕರು, ಜೆಸಿಬಿ ಮಾಲಕರ ಅಲೆದಾಟ..!

ಒಟ್ಟಿನಲ್ಲಿ, ತನಿಖೆಯ ನೆಪದಲ್ಲಿ ಬಡ ಕಾರ್ಮಿಕರನ್ನು ಮತ್ತು ಯಂತ್ರೋಪಕರಣಗಳ ಮಾಲೀಕರನ್ನು ಬಳಸಿಕೊಂಡ ಸರ್ಕಾರ ಹಾಗೂ ಎಸ್‌ಐಟಿ, ಈಗ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಮಂಗಳೂರು: ಧರ್ಮಸ್ಥಳದ ಆ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಹೊರತರಲು ವಿಶೇಷ ತನಿಖಾ ದಳ (SIT) ನಡೆಸಿದ ಉತ್ಖನನ ಕಾರ್ಯಾಚರಣೆಗೆ ಈಗ ಒಂದು ವರ್ಷ ತುಂಬುತ್ತಾ ಬಂದಿದೆ. ಆದರೆ, ಅಂದು ಮಳೆ, ಗಾಳಿ ಎನ್ನದೆ ಹಗಲಿರುಳು ಶ್ರಮಿಸಿದ ಕೂಲಿ ಕಾರ್ಮಿಕರು ಹಾಗೂ ಯಂತ್ರೋಪಕರಣಗಳ ಮಾಲಕರಿಗೆ ಮಾತ್ರ ಇನ್ನೂ ಬಿಲ್ ಪಾವತಿಯಾಗಿಲ್ಲ. ಸರ್ಕಾರದ ಈ ನಿರ್ಲಕ್ಷ್ಯದ ವಿರುದ್ಧ ಈಗ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದುಡಿದ ಹಣಕ್ಕಾಗಿ ಅಲೆದಾಟ:

ಕಳೆದ ಜುಲೈ 29, 2025 ರಿಂದ ಧರ್ಮಸ್ಥಳದಲ್ಲಿ ಎಸ್‌ಐಟಿ ಅಧಿಕಾರಿಗಳು ನಿರಂತರವಾಗಿ ಉತ್ಖನನ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹಿತಾಚಿ ಮಾಲಕರು ಹಾಗೂ ಕೂಲಿ ಕಾರ್ಮಿಕರಿಗೆ ಕಳೆದ ನವೆಂಬರ್‌ನಲ್ಲೇ ಬಿಲ್ ಪಾವತಿಯಾಗಬೇಕಿತ್ತು. ಆದರೆ ಕಾರ್ಯಾಚರಣೆ ಮುಗಿದು ತಿಂಗಳುಗಳೇ ಕಳೆದರೂ ಹಣ ಬಿಡುಗಡೆ ಮಾಡದೆ ಸರ್ಕಾರ ಸತಾಯಿಸುತ್ತಿದೆ ಎಂಬ ದೂರು ಕೇಳಿಬಂದಿದೆ.

ಸುನೀಲ್ ಕನ್ಯಾಡಿ ಅವರ ಹಿತಾಚಿ ಮಾಲಕರ ಅಳಲು:

ಸುನೀಲ್ ಕನ್ಯಾಡಿ ಎಂಬುವವರು ತಮ್ಮ ಹಿತಾಚಿ ಯಂತ್ರವನ್ನು ಸತತ 15 ದಿನಗಳ ಕಾಲ ಎಸ್‌ಐಟಿ ಕಾರ್ಯಾಚರಣೆಗೆ ನೀಡಿದ್ದರು. ಅದರಲ್ಲಿ ಕೇವಲ 10 ದಿನಗಳ ಕಾಲ ಮಾತ್ರ ಕೆಲಸ ನಿರ್ವಹಿಸಲಾಗಿತ್ತು. ಮಾನವೀಯತೆಯ ದೃಷ್ಟಿಯಿಂದ ಕೇವಲ ಕೆಲಸ ಮಾಡಿದ ದಿನಗಳ ಬಿಲ್ ಮಾತ್ರ ಕೇಳಿದರೂ ಸಹ, ಕಳೆದ 9 ತಿಂಗಳಿನಿಂದ ಬಿಲ್ ಪಾವತಿಸದೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಪಂಚಾಯತ್ ಮತ್ತು SIT ನಡುವೆ ಜಟಾಪಟಿ:

ಬಿಲ್ ವಿಚಾರವಾಗಿ ಸಂತ್ರಸ್ತರು ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ ಹೋದರೆ, ಅವರು ಎಸ್‌ಐಟಿ ಅಧಿಕಾರಿಗಳತ್ತ ಬೆರಳು ತೋರಿಸುತ್ತಿದ್ದಾರೆ. ಇತ್ತ ಎಸ್‌ಐಟಿ ಅಧಿಕಾರಿಗಳನ್ನು ವಿಚಾರಿಸಿದರೆ, "ನವೆಂಬರ್‌ನಲ್ಲೇ ಬಿಲ್ ಪಾವತಿಯಾಗಿದೆ" ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಟ್ಟಿನಲ್ಲಿ, ತನಿಖೆಯ ನೆಪದಲ್ಲಿ ಬಡ ಕಾರ್ಮಿಕರನ್ನು ಮತ್ತು ಯಂತ್ರೋಪಕರಣಗಳ ಮಾಲೀಕರನ್ನು ಬಳಸಿಕೊಂಡ ಸರ್ಕಾರ ಹಾಗೂ ಎಸ್‌ಐಟಿ, ಈಗ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.