Skip to main content
ವಿಡಿಯೋ
crime

ಆಟವಾಡಲು ಹೋಗಿದ್ದ 9 ವರ್ಷದ ಬಾಲಕ ಗುಂಡಿಗೆ ಬಿದ್ದು ದುರಂತ ಸಾವು; ಜೊತೆಗಿದ್ದ ಸ್ನೇಹಿತರು ಹೆದರಿ ಮಾಡಿದ್ದೇನು ಗೊತ್ತಾ..?

By Bhavana Gowda
ಆಟವಾಡಲು ಹೋಗಿದ್ದ 9 ವರ್ಷದ ಬಾಲಕ ಗುಂಡಿಗೆ ಬಿದ್ದು ದುರಂತ ಸಾವು; ಜೊತೆಗಿದ್ದ ಸ್ನೇಹಿತರು ಹೆದರಿ ಮಾಡಿದ್ದೇನು ಗೊತ್ತಾ..?

ಕೇಶ್ವಾಪುರದ ಆಜಾದ್ ನಗರ ನಿವಾಸಿಯಾದ ಬಾಲಾಜಿ (9) ಮೃತಪಟ್ಟ ದುರ್ದೈವಿ ಬಾಲಕ. ಆಟದ ಜೋಶ್‌ನಲ್ಲಿದ್ದ ಬಾಲಕರು ಹೆದರಿ ಮಾಡಿದ ಒಂದು ತಪ್ಪು, ಹೆತ್ತವರ ಒಡಲು ಬೇಯುವಂತೆ ಮಾಡಿದೆ.

ಹುಬ್ಬಳ್ಳಿ: ಆಟವಾಡಲು ಹೋದ ಒಂಬತ್ತು ವರ್ಷದ ಬಾಲಕನೊಬ್ಬ ನಿರ್ಮಾಣ ಹಂತದ ಕಟ್ಟಡದ ಪಿಲ್ಲರ್ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ನಡೆದಿದೆ. ಕೇಶ್ವಾಪುರದ ಆಜಾದ್ ನಗರ ನಿವಾಸಿಯಾದ ಬಾಲಾಜಿ (9) ಮೃತಪಟ್ಟ ದುರ್ದೈವಿ ಬಾಲಕ. ಆಟದ ಜೋಶ್‌ನಲ್ಲಿದ್ದ ಬಾಲಕರು ಹೆದರಿ ಮಾಡಿದ ಒಂದು ತಪ್ಪು, ಹೆತ್ತವರ ಒಡಲು ಬೇಯುವಂತೆ ಮಾಡಿದೆ.

ಕಾಂಪೌಂಡ್ ಒಳಗೆ ಹೋಗಿದ್ದೇ ಸಾವಿಗೆ ಕಾರಣವಾಯ್ತಾ?

ಬಾಲಾಜಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಆಟವಾಡುತ್ತಾ ಕೇಶ್ವಾಪುರದಿಂದ ವಿಜಯನಗರದ ಕಡೆಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಅಲ್ಲಿನ ಕಾಂಪೌಂಡ್ ಒಂದರ ಒಳಗೆ ಬಿದ್ದಿದ್ದ ತೆಂಗಿನಕಾಯಿಯನ್ನು ತರಲು ಬಾಲಾಜಿ ಒಳಗೆ ಹೋಗಿದ್ದಾನೆ. ಆದರೆ, ಅಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಪಿಲ್ಲರ್ ಹಾಕಲು ಆಳವಾದ ತಗ್ಗನ್ನು ತೋಡಲಾಗಿತ್ತು. ಇತ್ತೀಚಿನ ಮಳೆಯಿಂದಾಗಿ ಆ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು. ತೆಂಗಿನಕಾಯಿ ತೆಗೆದುಕೊಳ್ಳುವ ಆತುರದಲ್ಲಿ ಬಾಲಾಜಿ ಆಳವಾದ ಗುಂಡಿಗೆ ಬಿದ್ದಿದ್ದಾನೆ. ಗುಂಡಿ ತೀರಾ ಆಳವಾಗಿದ್ದರಿಂದ ಆತ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ.

ಹೆದರಿ ಪರಾರಿಯಾದ ಸ್ನೇಹಿತರು!

ಬಾಲಾಜಿ ನೀರಿನಲ್ಲಿ ಮುಳುಗುವುದನ್ನು ಕಂಡ ಆತನೊಂದಿಗೆ ಬಂದಿದ್ದ ಇಬ್ಬರು ಬಾಲಕರು ತೀವ್ರವಾಗಿ ಹೆದರಿದ್ದಾರೆ. ಗಾಬರಗೊಂಡ ಅವರು ಅಲ್ಲಿಂದ ತಕ್ಷಣ ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಹೆದರಿಕೆಯಿಂದ ಈ ವಿಷಯವನ್ನು ಹೆತ್ತವರಿಗಾಗಲಿ ಅಥವಾ ಬೇರೆ ಯಾರಿಗಾಗಲಿ ಹೇಳದೆ ಸುಮ್ಮನಾಗಿದ್ದಾರೆ.

ನಾಪತ್ತೆ ದೂರು ತಂದ ತಿರುವು: ಸಿಸಿಟಿವಿಯಲ್ಲಿ ಪತ್ತೆಯಾಯ್ತು ಶವ!

ಮಗ ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಬಾಲಾಜಿಯ ಪೋಷಕರು ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸಿಗದಿದ್ದಾಗ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಬಾಲಕ ಹೋದ ದಾರಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ಸಿಸಿಟಿವಿ ದೃಶ್ಯದಲ್ಲಿ ಬಾಲಾಜಿ ತನ್ನ ಸ್ನೇಹಿತರೊಂದಿಗೆ ವಿಜಯನಗರದ ಕಾಂಪೌಂಡ್ ಕಡೆಗೆ ಹೋಗುತ್ತಿರುವುದು ಪತ್ತೆಯಾಗಿದೆ. ತಕ್ಷಣ ಪೊಲೀಸರು ಆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಪಿಲ್ಲರ್ ಗುಂಡಿಯಲ್ಲಿ ಬಾಲಕನ ಶವ ತೇಲುತ್ತಿರುವುದು ಕಂಡುಬಂದಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆಟವಾಡಲು ಹೋದ ಮಗ ಹೆಣವಾಗಿ ಬಂದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.