Skip to main content
ವಿಡಿಯೋ
crime

ಕೊಲೆ ಆರೋಪಿಗಳಿಂದ ‘ಮನೆ ಖಾಲಿ ಮಾಡಿ’ ಅಂತ ನಿರಂತರ ಧಮ್ಕಿ; ರಕ್ಷಣೆ ಕೇಳಿ ಹೋದ್ರೆ ಸಾಕ್ಷಿ ಕೇಳಿದ್ರಾ ಪೊಲೀಸರು? ಏನಿದು ಯಶವಂತಪುರ ಸ್ಟೋರಿ?

By Bhavana Gowda
ಕೊಲೆ ಆರೋಪಿಗಳಿಂದ ‘ಮನೆ ಖಾಲಿ ಮಾಡಿ’ ಅಂತ ನಿರಂತರ ಧಮ್ಕಿ; ರಕ್ಷಣೆ ಕೇಳಿ ಹೋದ್ರೆ ಸಾಕ್ಷಿ ಕೇಳಿದ್ರಾ ಪೊಲೀಸರು? ಏನಿದು ಯಶವಂತಪುರ ಸ್ಟೋರಿ?

ಯಶವಂತಪುರ ಪೊಲೀಸರ ಈ ಧೋರಣೆಯಿಂದ ಬೇಸತ್ತ ಮೃತ ಯುವಕನ ಕುಟುಂಬಸ್ಥರು, ಇದೀಗ ನೇರವಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿ ನ್ಯಾಯ ಹಾಗೂ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ.

ಬೆಂಗಳೂರು: ನಡುರಸ್ತೆಯಲ್ಲಿ ಯುವಕನೊಬ್ಬನನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಿದ ಆರೋಪಿಗಳು ಈಗ ಜೈಲಿನಿಂದ ಹೊರಬಂದು, ಮೃತನ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿರುವ ಆತಂಕಕಾರಿ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಒಂದೆಡೆ ಕೊಲೆಗಡುಕರ ಧಮ್ಕಿ, ಇನ್ನೊಂದೆಡೆ ಪೊಲೀಸರ ನಿರ್ಲಕ್ಷ್ಯದ ನಡುವೆ ಸಿಲುಕಿ ನೊಂದ ಕುಟುಂಬ ಇದೀಗ ಕಣ್ಣೀರು ಹಾಕುತ್ತಾ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದೆ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗಂಭೀರ ಆರೋಪ ಕೇಳಿಬಂದಿದ್ದು, ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಅಂದು ನಡೆದಿದ್ದೇನು..?

ಕಳೆದ ನವೆಂಬರ್ 11ರಂದು ಮುತ್ಯಾಲನಗರದಲ್ಲಿ ನರಸಿಂಹ ಅಲಿಯಾಸ್ ಕೊಂಡ ಎಂಬ ಯುವಕನ ಭೀಕರ ಕೊಲೆಯಾಗಿತ್ತು. ಮಹಿಳೆಯೊಬ್ಬರ ಜೊತೆಗಿನ ಹಣದ ವ್ಯವಹಾರದ ವಿಚಾರವಾಗಿ ಗಲಾಟೆ ಆರಂಭವಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿದ್ದ ಐದಾರು ಮಂದಿಯ ಗ್ಯಾಂಗ್, ನರಸಿಂಹನನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಭೀಕರವಾಗಿ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ನರಸಿಂಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದನು.

ಮೂರೇ ತಿಂಗಳಿಗೆ ಬೇಲ್ ಸಿಕ್ಕಿದ್ದು ಹೇಗೆ?

ಯಶವಂತಪುರ ಠಾಣೆ ಪೊಲೀಸರು ಈ ಕೊಲೆ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸಿಲ್ಲ ಎಂಬ ಗಂಭೀರ ಆರೋಪವನ್ನು ಮೃತನ ಕುಟುಂಬಸ್ಥರು ಮಾಡಿದ್ದಾರೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಕಲೆಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪೊಲೀಸರ ಇದೇ ಬೇಜವಾಬ್ದಾರಿತನದಿಂದಾಗಿ ಘೋರ ಕೊಲೆ ಮಾಡಿದ್ದ ಆರೋಪಿಗಳಿಗೆ ಕೇವಲ ಮೂರೇ ತಿಂಗಳಲ್ಲಿ ಜಾಮೀನು (ಬೇಲ್) ಸಿಕ್ಕಿ ಹೊರಬಂದಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

'ಮನೆ ಖಾಲಿ ಮಾಡಿ, ಕೇಸ್ ವಾಪಸ್ ತಗೊಳ್ಳಿ' ಎಂದ ಖದೀಮರು!

ಜೈಲಿನಿಂದ ಹೊರಬಂದಿರುವ ಕೊಲೆ ಆರೋಪಿಗಳು ಈಗ ಮೃತ ನರಸಿಂಹನ ಕುಟುಂಬದ ಬೆನ್ನು ಬಿದ್ದಿದ್ದಾರೆ. "ಕೂಡಲೇ ಕೇಸ್ ವಾಪಸ್ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಜೀವ ಬೆದರಿಕೆ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ, "ಮನೆ ಖಾಲಿ ಮಾಡಿಕೊಂಡು ಓಡಿ ಹೋಗಿ" ಎಂದು ನಿರಂತರವಾಗಿ ಧಮ್ಕಿ ಹಾಕುತ್ತಿದ್ದಾರೆ ಎನ್ನಲಾಗಿದೆ.

"ಅವ್ರು ಬೆದರಿಕೆ ಹಾಕೋದನ್ನ ಹೇಗೆ ಸಾಕ್ಷಿ ಕೊಡೋದು?"

ಆರೋಪಿಗಳಿಂದ ಜೀವಭಯ ಎದುರಿಸುತ್ತಿರುವ ಕುಟುಂಬಸ್ಥರು ರಕ್ಷಣೆ ಕೋರಿ ಯಶವಂತಪುರ ಪೊಲೀಸರ ಬಳಿ ಹೋದರೆ, ಅಲ್ಲಿ ಮತ್ತೊಂದು ಆಘಾತ ಕಾದಿತ್ತು. ಆರೋಪಿಗಳನ್ನು ಬಂಧಿಸಿ ನಮಗೆ ರಕ್ಷಣೆ ಕೊಡಿ ಎಂದು ಬೇಡಿಕೊಂಡರೆ, ಪೊಲೀಸರು ಮಾತ್ರ "ಅವರು ನಿಮಗೆ ಬೆದರಿಕೆ ಹಾಕುತ್ತಿರುವುದಕ್ಕೆ ಮೊದಲು ಸಾಕ್ಷಿ ಕೊಡಿ" ಎಂದು ಉಲ್ಟಾ ಪ್ರಶ್ನೆ ಮಾಡುತ್ತಿದ್ದಾರಂತೆ.

"ಅವರು ಸಡನ್ ಆಗಿ ಬಂದು ನಮಗೆ ಜೀವ ಬೆದರಿಕೆ ಹಾಕಿ ಹೋಗುತ್ತಾರೆ. ಅದನ್ನು ನಾವು ಹೇಗೆ ಸಾಕ್ಷಿ ಸಮೇತ ರೆಕಾರ್ಡ್ ಮಾಡಿ ಕೊಡಲು ಸಾಧ್ಯ? ನಮಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಹೀಗೆ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು?" ಎಂದು ನರಸಿಂಹನ ಕುಟುಂಬ ಕಣ್ಣೀರು ಹಾಕಿದೆ. ಯಶವಂತಪುರ ಪೊಲೀಸರ ಈ ಧೋರಣೆಯಿಂದ ಬೇಸತ್ತ ಮೃತ ಯುವಕನ ಕುಟುಂಬಸ್ಥರು, ಇದೀಗ ನೇರವಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿ ನ್ಯಾಯ ಹಾಗೂ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ.