ಬೆಂಗಳೂರು: ಒಂದೇ ರೂಮಿನಲ್ಲಿ ಕಳ್ಳ-ಪೊಲೀಸ್ ವಾಸ್ತವ್ಯ..! ಈ ವೇಳೆ ಪೊಲೀಸ್ ಡ್ರೆಸ್ ಹಾಕೊಂಡು ಫೋಟೋಗೆ ಪೋಸ್ ಕೊಟ್ಟಿರೋ ಕಳ್ಳ. ಆತನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಗೋವಿಂದಪುರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಹೆಚ್.ಆರ್. ಸೋನಾರ್ ಅವರನ್ನು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬಾಂಬೆ ಸಲೀಂ ಎಂಬಾತ ಸಾಕಷ್ಟು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಈ ಸಂದರ್ಭದಲ್ಲಿ, ಅವನು ಕಾನ್ಸ್‌ಟೇಬಲ್ ಸೋನಾರ್ ಅವರೊಂದಿಗೆ ಒಂದೇ ಕೊಠಡಿಯಲ್ಲಿ ವಾಸವಾಗಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸಲೀಂನನ್ನು ಬಂಧಿಸಿದ ನಂತರ, ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ಆಘಾತಕಾರಿ ವಿಷಯಗಳು ಬಯಲಾಗಿವೆ. ಸಲೀಂ, ಸೋನಾರ್ ಅವರ ಪೊಲೀಸ್ ಸಮವಸ್ತ್ರವನ್ನು ಧರಿಸಿ ಫೋಟೋಗಳನ್ನು ತೆಗೆದುಕೊಂಡಿದ್ದ. ಅಷ್ಟೇ ಅಲ್ಲದೆ, ಅದೇ ಸಮವಸ್ತ್ರದಲ್ಲಿ ತನ್ನ ಪತ್ನಿಗೆ ವಿಡಿಯೋ ಕರೆ ಮಾಡಿ "ನಾನು ಕಳ್ಳನಾಗಿದ್ದರೂ ಪೊಲೀಸ್ ಸಮವಸ್ತ್ರದಲ್ಲಿ ಹೇಗೆ ಮಿಂಚುತ್ತೇನೆ" ಎಂದು ಹುಚ್ಚಾಟ ಮೆರೆದಿದ್ದಾನೆ. ಹಣ ಕೊಡಲಿಲ್ಲವೆಂದು ಪ್ರೇಮ್ ಎಂಬ ಯುವಕನ ಬರ್ಬರ ಹತ್ಯೆ: ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಘಟನೆ
ಸಮವಸ್ತ್ರದ ಮೇಲಿನ ನೇಮ್‌ಪ್ಲೇಟ್‌ನಿಂದ ಕಳ್ಳ ಮತ್ತು ಕಾನ್ಸ್‌ಟೇಬಲ್ ನಡುವಿನ ಸಂಬಂಧದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು. ಸದ್ಯಕ್ಕೆ, ಸೋನಾರ್ ಕಳ್ಳನಿಗೆ ಆಶ್ರಯ ನೀಡಿದ ಕಾರಣಕ್ಕೆ ಅಮಾನತುಗೊಂಡಿದ್ದಾರೆ. ಆದರೆ, ಸೋನಾರ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರೇ ಅಥವಾ ಇಲ್ಲವಾ ಎಂಬ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.