ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 42/2025ರಂತೆ ಪ್ರಕರಣ ದಾಖಲಾಗಿದ್ದು, ಬೆಳ್ತಂಗಡಿ ಪೊಲೀಸರು ಸಮೀರ್‌ನ ಬಳ್ಳಾರಿ ಮತ್ತು ಬೆಂಗಳೂರಿನ ನಿವಾಸಗಳಿಗೆ ಮೂರನೇ ಬಾರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ: ಗಿರೀಶ್ ಮುಟ್ಟಣ್ಣನವರ್, ಮಹೇಶ್ ತಿಮ್ಮರೋಡಿ, ಎಂ.ಡಿ. ಸಮೀರ್ ವಿರುದ್ಧ ದೂರು!
ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಸಮೀರ್ ಎಂ.ಡಿ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಐ ತಂತ್ರಜ್ಞಾನವನ್ನು ಬಳಸಿ ಸುಳ್ಳು ಮಾಹಿತಿಯೊಂದಿಗೆ ವಿಡಿಯೋ ಪ್ರಸಾರ ಮಾಡಿ, ಸಾರ್ವಜನಿಕರಲ್ಲಿ ಉದ್ರೇಕವನ್ನುಂಟುಮಾಡಿದ್ದಾರೆ ಎಂಬ ಆರೋಪವಿದೆ. ಈ ಕೃತ್ಯವು ಧರ್ಮಸ್ಥಳದ ಪವಿತ್ರತೆಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಧರ್ಮಸ್ಥಳದಲ್ಲಿ 1995ರಿಂದ 2014ರವರೆಗೆ ನೂರಾರು ಶವಗಳನ್ನು ಬಲವಂತವಾಗಿ ಹೂತು ಹಾಕಲಾಗಿದೆ ಎಂಬ ಮಾಜಿ ಸ್ವಚ್ಛತಾ ಕಾರ್ಮಿಕನ ದೂರಿನ ಹಿನ್ನೆಲೆಯಲ್ಲಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ.
ಸಾಕ್ಷಿದಾರರ ದೂರಿನಲ್ಲಿ ತಿಳಿಸಿರುವ ಮಾಹಿತಿಯನ್ನು ಹೊರತುಪಡಿಸಿ, ಸಮೀರ್ ಎಂ.ಡಿ. ಕಾಲ್ಪನಿಕ ಮಾಹಿತಿಯನ್ನು ಒಳಗೊಂಡ ವಿಡಿಯೋವನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋಗಳು ಜನರ ಭಾವನೆಗಳನ್ನು ಕೆರಳಿಸಿ, ಧರ್ಮಸ್ಥಳದ ಧಾರ್ಮಿಕ ಮೌಲ್ಯಗಳಿಗೆ ಕಳಂಕ ತಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕಲಂ 192, 240, ಮತ್ತು 353(1)(b) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಮೀರ್ ಎಂ.ಡಿ.ಗೆ ಈಗಾಗಲೇ ಎರಡು ಬಾರಿ ನೋಟಿಸ್ ಜಾರಿಗೊಳಿಸಲಾಗಿತ್ತು, ಆದರೆ ಆತ ಭದ್ರತೆಯ ಕಾರಣವೊಡ್ಡಿ ವಿಚಾರಣೆಗೆ ಹಾಜರಾಗಿಲ್ಲ. ಆತನ ಬೆಂಗಳೂರಿನ ಜಿಗಣಿಯಲ್ಲಿರುವ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದಾಗ, ಸಮೀರ್ ಮನೆಯಲ್ಲಿ ಇರಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇದರಿಂದ ಆತ ಪರಾರಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಸಮೀರ್ ತಮ್ಮ ಮನವಿಯಲ್ಲಿ, ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದಿರುವುದರಿಂದ ಭದ್ರತೆಯ ಕೊರತೆಯಿದೆ ಎಂದು ತಿಳಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅವಕಾಶ ಕೋರಿದ್ದಾರೆ. ಆದರೆ, ಪೊಲೀಸರು 48 ಗಂಟೆಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವ ಯೂಟ್ಯೂಬರ್‌ಗಳಿಗೆ ವಿದೇಶಿ ಧನಸಹಾಯವಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ: ಮಗಳು ನಾಪತ್ತೆ ಎಂದು ಹೇಳಿದ ಸುಜಾತಾ ಭಟ್‌ಗೆ SIT ನೋಟಿಸ್..!
ಬಿಜೆಪಿ ಕಾರ್ಯಕರ್ತರು ಮತ್ತು ಭಜರಂಗದಳದ ಸದಸ್ಯ ತೇಜಸ್ ಗೌಡ ಸಮೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಎಸ್‌ಐಟಿ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾಕ್ಷ್ಯಾಧಾರಿತ ಕ್ರಮಕ್ಕೆ ಒತ್ತು ನೀಡಲಾಗಿದೆ. ಸಮೀರ್‌ಗೆ ಮಂಗಳೂರು ಜಿಲ್ಲಾ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ದೊರೆತಿದ್ದರೂ, ವಿಚಾರಣೆಗೆ ಹಾಜರಾಗದಿದ್ದರೆ ಕಾನೂನಾತ್ಮಕ ಸಂಕಷ್ಟ ಎದುರಾಗಬಹುದು.