ಬೆಂಗಳೂರು/ಕೊಪ್ಪಳ/ಹುಬ್ಬಳ್ಳಿ (ಸೆ. 09): ಬಜಾಜ್ ಗ್ರೂಪ್ ಜೊತೆಗಿನ ಸಹಭಾಗಿತ್ವದ ಮುಕಂದ ಸುಮಿ ಮೂಲಕ ಕೊಪ್ಪಳದಲ್ಲಿ ಸ್ಥಾಪನೆಯಾಗಲಿರುವ ಉಕ್ಕು ತಯಾರಿಕಾ ಘಟಕಕ್ಕೆ ಸುಮಿಟೊಮೊ ಕಂಪನಿಯು ₹2,345 ಕೋಟಿ ಬಂಡವಾಳ ಹೂಡಿಕೆ ಮಾಡುತ್ತೇವೆ ಎಂದು ತಿಳಿಸಿದೆ. ಈ ಘಟಕವು 2028ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕೈಗಾರಿಕೆಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ, ರಾಜ್ಯ ಸರ್ಕಾರವು ಜಪಾನ್‌ನ ಪ್ರಮುಖ ಕಂಪನಿಗಳಾದ ಸುಮಿಟೊಮೊ, ಯಸ್ಕಾವಾ ಮತ್ತು ಜೆಎಫ್‌ಇ ಷೋಜಿಯೊಂದಿಗೆ ಮಹತ್ವದ ಮಾತುಕತೆಗಳನ್ನು ನಡೆಸಿದೆ.
ಈ ಘಟಕವು ವಾರ್ಷಿಕವಾಗಿ 3,50,000 ಟನ್‌ಗಳ ಕಬ್ಬಿಣ ಮತ್ತು ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ ಜೊತೆಗೆ, ಸುಮಿಟೊಮೊ ಕಂಪನಿಯು ರಾಜ್ಯದಲ್ಲಿ ಬಯೊಮಾಸ್ ಘಟಕ ಸ್ಥಾಪನೆಯ ಬಗ್ಗೆಯೂ ಆಸಕ್ತಿ ತೋರಿದೆ. ಬೆಂಗಳೂರಿನಲ್ಲಿ ಯಸ್ಕಾವಾದಿಂದ ಅತ್ಯಾಧುನಿಕ ಘಟಕಯಸ್ಕಾವಾ ಕಂಪನಿಯು ಬೆಂಗಳೂರಿನಲ್ಲಿ ಮೋಷನ್ ಕಂಟ್ರೋಲ್ ಮತ್ತು ವೇರಿಯೇಬಲ್ ಫ್ರಿಕ್ವೆನ್ಸಿ ಡ್ರೈವ್ಸ್ ಘಟಕವನ್ನು ಸ್ಥಾಪಿಸಲು ಬಂಡವಾಳ ಹೂಡಿಕೆ ಮಾಡಲಿದೆ. ಈ ಘಟಕವು ಕರ್ನಾಟಕವನ್ನು ಅತ್ಯಾಧುನಿಕ ತಂತ್ರಜ್ಞಾನದ ತಯಾರಿಕಾ ಕೇಂದ್ರವನ್ನಾಗಿ ಮಾಡಲು ಸಹಕಾರಿಯಾಗಲಿದೆ.
ಜೊತೆಗೆ, ₹400 ಕೋಟಿ ವೆಚ್ಚದಲ್ಲಿ ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳು (BEV) ಮತ್ತು ವಿದ್ಯುತ್ ಚಾಲಿತ ವಾಹನಗಳ (EV) ಮೋಟರ್ ಕೋರ್‌ಗಳ ತಯಾರಿಕೆಯ ಯೋಜನೆಯನ್ನು ಶೀಘ್ರವೇ ಕಾರ್ಯಗತಗೊಳಿಸಲಿದೆ ಎಂದು ಕಂಪನಿಯು ಭರವಸೆ ನೀಡಿದೆ.ಹುಬ್ಬಳ್ಳಿಯ ಎನ್‌ಜಿಇಎಫ್ ಪುನಶ್ಚೇತನಕ್ಕೆ ಜೆಎಫ್‌ಇ ಷೋಜಿಯೊಂದಿಗೆ ಚರ್ಚೆಸಚಿವ ಎಂ.ಬಿ. ಪಾಟೀಲ ಅವರು ಜೆಎಫ್‌ಇ ಷೋಜಿ ಕಂಪನಿಯೊಂದಿಗೆ ಹುಬ್ಬಳ್ಳಿಯ ರಾಜ್ಯ ಸರ್ಕಾರದ ಸ್ವಾಮ್ಯದ ‘ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್‌ಜಿಇಎಫ್)’ಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ.
ಈ ಚರ್ಚೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಕಾರ್ಖಾನೆಗೆ ಹೊಸ ಚೈತನ್ಯ ತುಂಬುವ ಗುರಿಯನ್ನು ಹೊಂದಿದೆ. ವಿದ್ಯುತ್ ಪರಿವರ್ತಕಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜೆಎಫ್‌ಇ ಷೋಜಿಯೊಂದಿಗಿನ ಈ ಸಹಭಾಗಿತ್ವ ಯಶಸ್ವಿಯಾದರೆ, ಎನ್‌ಜಿಇಎಫ್‌ಗೆ ನವಚೈತನ್ಯ ದೊರೆಯಲಿದೆ. ಈ ಮಾತುಕತೆಯ ಭಾಗವಾಗಿ, ಜೆಎಫ್‌ಇ ಷೋಜಿಯ ಉನ್ನತಾಧಿಕಾರಿಗಳಾದ ಹಿರೋಶಿ ಲಿಜಿಮಾ ಮತ್ತು ಹಿಡೆಕಸು ಯೋಶಿಒಕೊ ಅವರನ್ನು ಹುಬ್ಬಳ್ಳಿಯ ಘಟಕಕ್ಕೆ ಭೇಟಿ ನೀಡಲು ಆಹ್ವಾನಿಸಲಾಗಿದೆ.
ವೆಬ್ ಸೀರಿಸ್ ಮೂಲಕ ಬರಲಿದೆ 'ಮಹಾಭಾರತ'...ಯಾವ OTTಯಲ್ಲಿ ಸ್ಟ್ರೀಮಿಂಗ್ ಆಗಲಿದೆ?
ನಿಯೋಗದಲ್ಲಿನ ಅಧಿಕಾರಿಗಳು ರಾಜ್ಯದ ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ. ಈ ಭೇಟಿಯು ಕರ್ನಾಟಕದ ಕೈಗಾರಿಕಾ ವಲಯಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ.