Skip to main content
ವಿಡಿಯೋ
general

ಧರ್ಮಸ್ಥಳ ಪ್ರಕರಣ: 120ಕ್ಕೂ ಹೆಚ್ಚು ಮಣ್ಣಿನ ಸ್ಯಾಂಪಲ್‌ಗಳು ಸಂಗ್ರಹ...ಆರೋಪಿಗಳಿಗೆ ಕಾನೂನು ಕಗ್ಗಂಟು ತರಿಸುತ್ತಾ FSL ವರದಿ?

By Shravanthi R
ಧರ್ಮಸ್ಥಳ ಪ್ರಕರಣ: 120ಕ್ಕೂ ಹೆಚ್ಚು ಮಣ್ಣಿನ ಸ್ಯಾಂಪಲ್‌ಗಳು ಸಂಗ್ರಹ...ಆರೋಪಿಗಳಿಗೆ ಕಾನೂನು ಕಗ್ಗಂಟು ತರಿಸುತ್ತಾ FSL ವರದಿ?

ಧರ್ಮಸ್ಥಳ ಗ್ರಾಮದ ಶವ ಹೂತ ಪ್ರಕರಣದಲ್ಲಿ ಮಣ್ಣಿನ ಮಾದರಿಗಳ ಎಫ್‌ಎಸ್‌ಎಲ್ ಪರೀಕ್ಷೆ ನೇರ ಪರಿಣಾಮ ಉಂಟುಮಾಡಬಹುದು. ಎಸ್‌ಐಟಿ 120ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ತನಿಖೆಯನ್ನು ಮುಂದುವರಿಸುತ್ತಿದೆ.

ಧರ್ಮಸ್ಥಳ ಗ್ರಾಮದ ಸಾಮೂಹಿಕ ಶವ ದಫನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಈ ಪ್ರಕರಣದ ದೂರುದಾರ ಚಿನ್ನಯ್ಯ ನೀಡಿದ ಹೇಳಿಕೆ ಆಧಾರದ ಮೇಲೆ ನಡೆಸಲಾದ ಅಗೆತ ಕಾರ್ಯಾಚರಣೆಯಿಂದ ಸಂಗ್ರಹಿಸಿದ ಮಣ್ಣಿನ ಮಾದರಿಗಳ ಎಫ್‌ಎಸ್‌ಎಲ್ ವರದಿ ಶೀಘ್ರದಲ್ಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೈ ಸೇರಲಿದೆ. ಈ ವರದಿ ತನಿಖೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಜುಲೈ 29 ರಿಂದ ಆಗಸ್ಟ್ 14 ರವರೆಗೆ ಒಟ್ಟು 17 ಸ್ಥಳಗಳಲ್ಲಿ ಅಗೆತ ಮತ್ತು ಶೋಧ ಕಾರ್ಯ ನಡೆದಿತ್ತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಸ್ಥಳ ಸಂಖ್ಯೆ 6 ರಲ್ಲಿ ಒಂದು ಅಸ್ಥಿಪಂಜರ ಪತ್ತೆಯಾಗಿದೆ. ಅಲ್ಲದೆ, ಬಂಗ್ಲೆಗುಡ್ಡೆ ಕಾಡಿನಲ್ಲಿ ನೆಲದ ಮೇಲೆ ಮತ್ತೊಂದು ಅಸ್ಥಿಪಂಜರ ದೊರೆತಿತ್ತು. ಈ ಎರಡೂ ಅಸ್ಥಿಪಂಜರಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ.

ಅಸ್ಥಿಪಂಜರಗಳು ಸಿಕ್ಕಿದ ಸ್ಥಳಗಳು ಮಾತ್ರವಲ್ಲದೆ, ಅಗೆತ ನಡೆಸಲಾದ ಎಲ್ಲ ಗುಂಡಿಗಳಿಂದಲೂ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಮಣ್ಣಿನಲ್ಲಿ ಮಾನವ ಅಸ್ಥಿಪಂಜರದ ಡಿಎನ್‌ಎ ಅಂಶಗಳಿವೆಯೇ ಎಂಬುದನ್ನು ಪ್ರಯೋಗಾಲಯದಲ್ಲಿ ಕೂಲಂಕಷವಾಗಿ ಪರೀಕ್ಷಿಸಲಾಗುತ್ತಿದೆ. ನೇರವಾಗಿ ಮೂಳೆ ಅಥವಾ ಅಸ್ಥಿಪಂಜರ ಸಿಗದ ಕಡೆ ಮಣ್ಣಿನ ತಪಾಸಣೆ ಪ್ರಮುಖವಾಗಿದೆ.

ಒಂದು ವೇಳೆ, ಈ ಮಣ್ಣಿನ ಮಾದರಿಗಳಲ್ಲಿ ಮಾನವ ಅಸ್ಥಿಪಂಜರದ ಡಿಎನ್‌ಎ ಪತ್ತೆಯಾದರೆ, ತನಿಖೆಗೆ ಹೊಸ ದಿಕ್ಸೂಚಿ ಸಿಕ್ಕಂತಾಗುತ್ತದೆ. ಇದು ಪ್ರಕರಣದ ಜಟಿಲತೆಯನ್ನು ಬಿಡಿಸಲು ನಿರ್ಣಾಯಕವಾಗಬಹುದು. ಆದರೆ, ಡಿಎನ್‌ಎ ಪತ್ತೆಯಾಗದಿದ್ದಲ್ಲಿ, ದೂರುದಾರ ಮತ್ತು ಪ್ರಕರಣದ ಸೂತ್ರಧಾರರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಮೂಲಗಳು ತಿಳಿಸಿವೆ. ಎಸ್‌ಐಟಿ ಅಧಿಕಾರಿಗಳು ಈವರೆಗೆ 120ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದಾರೆ.

The Silk Route Spy: The True Story of an Indian Double Agent Paperback – 5 August 2024

ಇದೇ ವೇಳೆ, ಎಸ್‌ಐಟಿ ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಮುಂದುವರಿಸಿದೆ. 1987 ರಿಂದ 2025 ರವರೆಗಿನ ದಾಖಲೆಗಳನ್ನು ಪರಿಶೀಲಿಸುತ್ತಿರುವ ಎಸ್‌ಐಟಿ, ಪ್ರಕರಣದ ವಿವಿಧ ಆಯಾಮಗಳನ್ನು ತನಿಖೆ ಮಾಡುತ್ತಿದೆ. ಪಂಚಾಯಿತಿಯು ಎಸ್‌ಐಟಿ ಕೇಳಿದ ಎಲ್ಲ ದಾಖಲೆಗಳನ್ನು ಒದಗಿಸುತ್ತಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ತನಿಖೆಗೆ ಪಂಚಾಯಿತಿ ದಾಖಲೆಗಳು ಪ್ರಮುಖ ಆಧಾರವಾಗಿವೆ. 1987 ರಿಂದ 2025 ರವರೆಗಿನ ಯುಡಿ ಆರ್ ಪಾವತಿ ರಶೀದಿಗಳು ಸೇರಿದಂತೆ ಎಸ್‌ಐಟಿ ಕೇಳುವ ಎಲ್ಲ ದಾಖಲೆಗಳನ್ನು ನಾವು ನೀಡುತ್ತಿದ್ದೇವೆ. ನಮ್ಮ ದಾಖಲೆಗಳು ಮುಂದಿನ ಹಂತದ ತನಿಖೆಗೆ ಸಹಕಾರಿಯಾಗಲಿವೆ, ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಟೋದಲ್ಲಿ ಕಳೆದುಕೊಂಡಿದ್ದ ಯುವತಿಯ ಇಯರ್‌ ಪೋಡ್‌ ಹುಡುಕಿಕೊಟ್ಟು ಮಾನವೀಯತೆ ಮೆರೆದ ಆಟೋ ಡ್ರೈವರ್‌ ದರ್ಶನ್‌..!!