ರಾಜ್ಯ ರಾಜಕೀಯದಲ್ಲಿ ಬಿಸಿ ಗಾಳಿ ಬೀಸುತ್ತಿರುವಂತೆಯೇ, ಕಾಂಗ್ರೆಸ್ ಪಾಳಯದಲ್ಲಿ ನವೆಂಬರ್ ಕ್ರಾಂತಿ, ಮುಖ್ಯಮಂತ್ರಿ ಬದಲಾವಣೆ ಹಾಗೂ ಸಂಪುಟ ಪುನರ್‌ರಚನೆ ಕುರಿತ ಚರ್ಚೆಗಳು ತೀವ್ರಗೊಂಡಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಅಲರ್ಟ್ ಮೋಡ್‌ಗೆ ಪ್ರವೇಶಿಸಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ತೀವ್ರ ಚರ್ಚೆ ನಡೆಯಿತು. ಪಕ್ಷ ಸಂಘಟನೆ, ಸರ್ಕಾರದ ವಿರುದ್ಧದ ಹೋರಾಟ, ಬೆಂಗಳೂರು ಪಾಲಿಕೆ ಚುನಾವಣಾ ಸಿದ್ಧತೆ, ಕೆಲ ಜಿಲ್ಲೆಗಳಲ್ಲಿ ಉಂಟಾಗಿರುವ ಭಿನ್ನಮತ, ಬಿಹಾರ ಚುನಾವಣಾ ಪ್ರಚಾರ ಸೇರಿದಂತೆ ಹಲವು ವಿಚಾರಗಳು ಸಭೆಯ ಅಜೆಂಡಾದಲ್ಲಿದ್ದವು. ಕರ್ನಾಟಕ ಕಾಂಗ್ರೆಸ್ ಸಂಪುಟದಲ್ಲಿ ಬದಲಾವಣೆಯ ಪರ್ವ? ರಾಜೀನಾಮೆ ಗುಸುಗುಸು ಸತ್ಯವೇ?
ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಒಳಕಚಗುಳಿ, ಮುಂಬರುವ ಮುಖ್ಯಮಂತ್ರಿ ಬದಲಾವಣೆ ಮತ್ತು ಸಂಪುಟ ಪುನರ್‌ರಚನೆಯ ಕುರಿತು ಸಭೆಯಲ್ಲಿ ವಿಶೇಷ ಚರ್ಚೆ ನಡೆಯಿತು. ಕಾಂಗ್ರೆಸ್‌ನ ಬೆಳವಣಿಗೆಗಳ ಮೇಲೆ ನಿಗಾ ಇರಿಸಿ, ಅವುಗಳಿಗೆ ತಕ್ಕ ರೀತಿಯಲ್ಲಿ ರಾಜಕೀಯ ತಂತ್ರ ರೂಪಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಜೊತೆಗೆ, ಕಾಂಗ್ರೆಸ್‌ನ ಚಟುವಟಿಕೆಗಳ ಬಗ್ಗೆ ಹೈಕಮಾಂಡ್‌ಗೆ ನಿರಂತರವಾಗಿ ಮಾಹಿತಿ ರವಾನಿಸುವ ನಿರ್ಧಾರವೂ ಕೈಗೊಳ್ಳಲಾಗಿದೆ.
ಬಿಹಾರ ಚುನಾವಣೆ ಫಂಡಿಂಗ್ ಆರೋಪ!
ಸಭೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನಿಂದ ಹಣ ಕಳುಹಿಸಲಾಗುತ್ತಿದೆ ಎಂಬ ಗಂಭೀರ ಆರೋಪದ ಕುರಿತೂ ಚರ್ಚೆ ನಡೆದಿದೆ. ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರಿಂದ ಸುಮಾರು 300 ಕೋಟಿ ರೂ. ಫಂಡಿಂಗ್ ನಡೆದಿರುವ ಸಾಧ್ಯತೆಗಳ ಬಗ್ಗೆ ಮಾತುಕತೆ ನಡೆದಿದೆ. ಈ ವಿಚಾರವನ್ನು ಬಿಜೆಪಿ ತನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. Marc Loire Women's Slip on Casual Solid Pumps Heels
ಜಾತಿ ಜನಗಣತಿ ವರದಿ ಮತ್ತು ಜೆಡಿಎಸ್ ಸಹಕಾರ
ಸರ್ಕಾರದ ಮಹತ್ವಾಕಾಂಕ್ಷಿ ಜಾತಿ ಜನಗಣತಿ ವರದಿ ಶೀಘ್ರದಲ್ಲೇ ಬಹಿರಂಗವಾಗುವ ಸಾಧ್ಯತೆ ಇದ್ದು, ಅದಕ್ಕೆ ಬಿಜೆಪಿ ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕು ಎಂಬುದರ ಕುರಿತು ಕೋರ್ ಕಮಿಟಿ ಸದಸ್ಯರು ಗಹನ ಚರ್ಚೆ ನಡೆಸಿದ್ದಾರೆ. ಜೊತೆಗೆ, ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಜೆಡಿಎಸ್ ಜೊತೆಗೂಡಿ ಹಮ್ಮಿಕೊಳ್ಳುವ ಪ್ರಸ್ತಾವನೆಯನ್ನೂ ಸಭೆಯಲ್ಲಿ ಪರಿಗಣಿಸಲಾಗಿದೆ. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳಿಂದ, ಮುಂಬರುವ ವಾರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಮರ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಸ್ಪಷ್ಟವಾಗಿವೆ.