ನಟ ದರ್ಶನ್ ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಸಂದರ್ಭದಲ್ಲಿ, ಜೈಲಿನೊಳಗಿನ ಕೆಲವು ವೀಡಿಯೊಗಳು ವೈರಲ್ ಆಗುತ್ತಿದ್ದು, ದರ್ಶನ್ ಆಪ್ತ ನಟ ಧನ್ವೀರ್ ಗೌಡಗೂ ಇದಕ್ಕೂ ಸಂಬಂಧವಿದೆಯೇ ಎಂದು ಪೊಲೀಸರು ಶಂಕಿಸಿ ವಿಚಾರಣೆ ನಡೆಸಿದ್ದಾರೆ.
ಸಾಮಾನ್ಯವಾಗಿ, ಕೇಂದ್ರ ಕಾರಾಗೃಹಗಳಲ್ಲಿ ಕೈದಿಗಳಿಗೆ ಕನಿಷ್ಠ ಸೌಲಭ್ಯಗಳು ಮಾತ್ರ ದೊರೆಯುತ್ತವೆ ಎಂದು ಭಾವಿಸಲಾಗಿದೆ. ಜೈಲು ನಿಯಮಗಳ ಪ್ರಕಾರ, ಸೀಮಿತ ಸೌಕರ್ಯಗಳು ಮಾತ್ರ ಲಭ್ಯವಿರುತ್ತವೆ. ಆದರೆ, ಹಣವಿದ್ದವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ಸಿಗುತ್ತದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿರುವ ವೀಡಿಯೊಗಳು ವೈರಲ್ ಆಗಿವೆ.American Tourister Large Icor () 82Cms|Soft Spinner Carry On Trolley Bag for Travel|Wet Pocket| Expandable|Polyester Luggage|Combination Lock| 4 Wheel Suitcase for Men&Women (Teal)|Light Weight&Durable
ಇತ್ತೀಚೆಗೆ, ಜೈಲಿನಲ್ಲೇ ಕೈದಿಗಳು ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವೀಡಿಯೊವೊಂದು ಹರಿದಾಡಿತ್ತು. ಇದರ ಬೆನ್ನಲ್ಲೇ, ಅತ್ಯಾಚಾರ ಪ್ರಕರಣದ ಆರೋಪಿ ಉಮೇಶ್ ರೆಡ್ಡಿ ಜೈಲಿನಲ್ಲಿ ಟಿವಿ ನೋಡುತ್ತಾ, ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಆರಾಮವಾಗಿ ಇರುವುದು ಕಂಡುಬಂದಿದೆ. ಐಸಿಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಅವರಿಗೂ ರಾಜಾತಿಥ್ಯ ಸಿಕ್ಕಿರುವ ವರದಿಗಳು ಹೊರಬಿದ್ದು, ಸಂಬಂಧಿತ ವೀಡಿಯೊಗಳು ಸುದ್ದಿಯಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಸದ್ಯ, ಜೈಲಿನಲ್ಲಿ ಕೈದಿಗಳು ಇಷ್ಟೊಂದು ಆರಾಮವಾಗಿರುವ ವೀಡಿಯೊಗಳು ಹೇಗೆ ಹೊರಬಂದವು ಎಂಬ ಚರ್ಚೆ ಶುರುವಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ನಟ ಧನ್ವೀರ್ ಈ ವೀಡಿಯೊಗಳನ್ನು ಸೋರಿಕೆ ಮಾಡಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಕಾರಣಕ್ಕೆ ಅವರನ್ನು ಸಿಸಿಬಿ ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ, ಧನ್ವೀರ್ ಅವರ ಫೋನ್‌ನಲ್ಲಿ ಯಾವುದೇ ವೀಡಿಯೊಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗಲೂ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ವಿಷಯ ಬಹಿರಂಗವಾಗಿತ್ತು. ಆಗ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಅವರು ಜಾಮೀನು ಪಡೆದು ಹೊರಬಂದಿದ್ದರು. ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು, ಮತ್ತು ಜಾಮೀನು ರದ್ದಾಗಿತ್ತು.
ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಗಮನಕ್ಕೆ ಬಂದಿತ್ತು. ಹಾಗಾಗಿ, ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಜೈಲು ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆಗಸ್ಟ್ 14ರಂದು ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಬಾರಿ ಜೈಲು ಅಧಿಕಾರಿಗಳು ಕಟ್ಟುನಿಟ್ಟಿನ ನಿಯಂತ್ರಣ ಹೇರಿದ್ದು, ಜೈಲ್ ಮ್ಯಾನುಯಲ್ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ.
ನಟ ದರ್ಶನ್ ಹಾಸಿಗೆ ಮತ್ತು ದಿಂಬು ಕೋರಿ ವಕೀಲರ ಮೂಲಕ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಿಸಿಲಿನಲ್ಲಿ ಓಡಾಡಲು ಬಿಡದಿರುವುದರಿಂದ ತಮ್ಮ ಕೈಗಳಿಗೆ ಫಂಗಸ್ ಬಂದಿದೆ ಮತ್ತು ಕನಿಷ್ಠ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಅವರು ದೂರಿದ್ದರು. ಇದೇ ಸಮಯದಲ್ಲಿ, ಇತರ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ವೀಡಿಯೊಗಳು ಹೊರಬಂದು ವಿವಾದ ಸೃಷ್ಟಿಸಿವೆ. ಹಾಗಾಗಿ, ಈ ವೀಡಿಯೊಗಳು ಹೇಗೆ ಹೊರಬಂದವು ಎಂಬ ಕುರಿತು ಚರ್ಚೆ ಶುರುವಾಗಿದೆ.ಇದನ್ನು ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಡಿ-ಗ್ಯಾಂಗ್ ವಿರುದ್ಧ ಟ್ರಯಲ್ ದಿನಾಂಕ ನಿರ್ಣಯಕ್ಕೆ ಇಂದು ಮಹತ್ವದ ವಿಚಾರಣೆ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಹ ಪ್ರತಿಕ್ರಿಯಿಸಿದ್ದಾರೆ. "ನಮಗೂ ಈ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಮಾಧ್ಯಮಗಳಲ್ಲಿಯೂ ಸುದ್ದಿ ನೋಡಿದ್ದೇನೆ. ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ" ಎಂದು ಅವರು ತಿಳಿಸಿದ್ದಾರೆ.