ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ʻನೆನಪಿನ ದೋಣಿಯಲ್ಲಿʼ ಸಾಗಿದ ಕವಿ, ದಾರ್ಶನಿಕ, ಮೇರು ಸಾಹಿತಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಇಂದು ಅವರ ಜನ್ಮ ದಿನಾಚರಣೆ. ಶಿವಮೊಗ್ಗದ ತೀರ್ಥಹಳ್ಳಿಯ ಕುಪ್ಪಳ್ಳಿಯವರಾದ ಕುವೆಂಪು ಅವರ ಹೆಸರು ಎಂದೆಂದಿಗೂ ಚಿರಪರಿಚಿತ. ಅವರ ಸಾಹಿತ್ಯ ಕೃಷಿ ಹಾಗೂ ದಾರ್ಶನಿಕತೆ ಯುಗಾಂತರಕ್ಕೂ ಅನುರಣಿಸುತ್ತದೆ.
ಅನಿಕೇತನ ಮತ್ತು ಚೈತನ್ಯದ ಸಾರಸಿಂಧು -
ಕುವೆಂಪು ಎಂದಾಕ್ಷಣ ನೆನಪಾಗುವುದೇ ಅವರ ಪ್ರಸಿದ್ದ ಪದ್ಯ ಸಾಲು - “ಓ ನನ್ನ ಚೇತನ, ಆಗು ನೀ ಅನಿಕೇತನ”. ಯಾವ ಜಾತಿ, ಮತ, ಪಂಥ, ದೇಶ-ಭಾಷೆಗಳ ಗಡಿಗಳಾಚೆಗೂ ಬದುಕು ವಿಸ್ತಾರಗೊಳ್ಳಲಿ ಎನ್ನುವ ಮೂಲಕ ʻಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಎಂದರು. ತಮ್ಮ ವೈಚಾರಿಕ ದೃಷ್ಟಿಕೋನಗಳ ಮುಖಾಂತರ ಹೃದಯ ವೈಶಾಲ್ಯತೆಯನ್ನು ಹೊಂದಿ ಎಂದು ʻವಿಚಾರ ಕ್ರಾಂತಿಗೆ ಆಹ್ವಾನʼ ನೀಡಿದರು.
ವಿಶ್ವಮಾನವ ಸಂದೇಶದ ಪಂಚ ಮಂತ್ರಗಳು -
ಮನುಜಮತ - Religion of Humanity,
ವಿಶ್ವಪಥ - Universal Path,
ಸರ್ವೋದಯ - Welfare of All,
ಸಮನ್ವಯ - Reconciliation
ಹಾಗೂ ಪೂರ್ಣದೃಷ್ಟಿ - Integral Vision
ಈ ಪಂಚ ಮಂತ್ರಗಳ ಸಾಕಾರ ಮಹತ್ವಗುಣಗಳ ಮೂಲಕ ಹಿರಿಯರು ಮಾನವತೆಯನ್ನು ಎತ್ತಿಹಿಡಿದಿದ್ದಾರೆ. ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಅವರು, ವಿಜ್ಞಾನದ ಪ್ರಗತಿಯ ಅಗತ್ಯತೆಯನ್ನು ತಿಳಿಯಪಡಿಸಿದ್ದಾರೆ. ಜ್ಞಾನಪೀಠ ಪುರಸ್ಕೃತರಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಯ ಜೊತೆಗೆ ಈ ಅದಮ್ಯ ಚೇತನರು ಸಾಹಿತ್ಯ ಲೋಕದ ದೀವಟಿಗೆಯಂತೆ ಬೆಳಗಿದ್ದಾರೆ.
ಕನ್ನಡ ನಾಡು-ನುಡಿ, ಸಾಹಿತ್ಯ, ವಿಶ್ವಮಾನವ ಸಂದೇಶ, ಮಂತ್ರ-ಮಾಂಗಲ್ಯ, ಪ್ರಕೃತಿ ಸೌಂದರ್ಯ, ರೈತಹಿತ, ವೈಜ್ಞಾನಿಕತೆ, ಸಾಮಾಜಿಕ ಮನೋಭಾವ ಹೀಗೆ ಅವರ ಜ್ಞಾನ ಪ್ರಸರಣವು ಜನಮಾನಸದಲ್ಲಿ ಬಿತ್ತರವಾಗಿವೆ. ಹುಟ್ಟುತ್ತಲೇ ಪ್ರತೀ ಮಗುವು ವಿಶ್ವಮಾನವನಾಗುತ್ತದೆ, ಆದರೆ, ಬೆಳೆಯುತ್ತಾ ನಾವದನ್ನು ಅಲ್ಪಮಾನವನನ್ನಾಗಿ ಮಾಡಿಬಿಡುತ್ತೇವೆ ಎಂಬ ಮನವರಿಕೆ ಮಾಡಿಕೊಟ್ಟಿದ್ದಾರೆ.
“ಯಾವ ಕಾಲದ ಶಾಸ್ರ್ತವೇನು ಹೇಳಿದರೇನು? ಹೃದಯಕ್ಕೂ ಮಿಗಿಲಾದ ಶಾಸ್ರ್ತವಿಹುದೇನು?” ಎಂಬ ಅವರ ವಿಚಾರಧಾರೆಗಳು, ಅಕ್ಷರ ಅಸ್ಮಿತೆ ಹಾಗೂ ಅನಂತ ಪ್ರಜ್ಞೆಯು, ಸಮಾಜದಲ್ಲಿರುವ ಅಂಧಶ್ರದ್ದೆ ಹಾಗೂ ಗೊಡ್ಡು ಸಂಪ್ರದಾಯ, ಮೌಢ್ಯತೆಯನ್ನ ತೊಡೆದುಹಾಕುವಲ್ಲಿ ದಿಟ್ಟ ಹೆಜ್ಜೆಯನ್ನಿಡುತ್ತದೆ. "ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತದೆ", "ಜೀವಿಸುವುದೇ ಜೀವನದ ಪರಮ ಶ್ರೇಷ್ಠ ಗುರಿ" ಹೀಗೆ ಅವರ ಒಂದೊಂದು ನುಡಿನಮನಗಳು ಜೀವನವನ್ನು ಹಾಸುಹೊಕ್ಕಾಗಿಸಿದೆ.
“ಆದರ್ಶಗಳು ನಾವು ಪಠಿಣ ಮಾಡುವ ಗೊಡ್ಡು ಮಂತ್ರಗಳಲ್ಲ, ಅವು ನಮ್ಮ ಜೀವನದ ಉಸಿರು” ಎಂದು ಹೇಳಿದ ರಸಋಷಿ ಕುವೆಂಪು ಅವರನ್ನು ಸ್ಮರಿಸದ ದಿನವೇ ಅರ್ಥಪೂರ್ಣ ಎಂದೆನ್ನಬಹುದು. ಮಾನವತೆಯ ವಿಚಾರಶಕ್ತಿಯನ್ನು ಸಾರಿದ ಪುಟ್ಟಜ್ಜರೆಂಬ ಮಹಾಚೇತನರಿಗೆ ಈ ದಿನವು ಪ್ರತೀ ಮಿಡಿವ ಹೃದಯಾಂತರಾಳದ ಮುಖೇನ ಮುಡಿಪಾಗಿದೆ. ಇದನ್ನೂ ಓದಿ: ಕಂಟೆಂಟ್ ಕ್ರಿಯೇಷನ್ ಹಾಗೂ ಮ್ಯಾನೇಜ್‌ಮೆಂಟ್: ಯಾರು ಬೆಸ್ಟ್ - ಎಐ ಅಥವಾ ಮಾನವನಾ?