ಭಾರತದಿಂದ ಈ ಬಾರಿ ಅಧಿಕೃತವಾಗಿ ಆಸ್ಕರ್ಸ್‌ಗೆ ಆಯ್ಕೆ ಆಗಿರುವ ‘ಹೋಮ್‌ಬೌಂಡ್’ ಸಿನಿಮಾ ಹಂತ ಹಂತವಾಗಿ ಮಹತ್ವದ ಸಾಧನೆ ಮಾಡುತ್ತಾ ಬಂದಿದೆ. ಈಗಾಗಲೇ ಪ್ರಾಥಮಿಕ ಹಂತವನ್ನು ದಾಟಿರುವ ಈ ಸಿನಿಮಾ, ನಂತರ ಅಂತಿಮ ಹದಿನೈದು ಸಿನಿಮಾಗಳ ಪಟ್ಟಿಗೂ ಆಯ್ಕೆ ಆಗಿತ್ತು. ಇದೀಗ ನಾಮಿನೇಷನ್‌ಗೆ ಶಾರ್ಟ್ ಲಿಸ್ಟ್ ಆಗುವ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಆಸ್ಕರ್ಸ್‌ಗೆ ಇನ್ನಷ್ಟು ಸಮೀಪವಾಗಿದೆ.
ಆಸ್ಕರ್ಸ್ ಅಥವಾ ಅಕಾಡೆಮಿ ಅವಾರ್ಡ್ಸ್ ಅನ್ನು ವಿಶ್ವದ ಅತ್ಯುನ್ನತ ಸಿನಿಮಾ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಯಲ್ಲಿ ಭಾರತದ ಸಿನಿಮಾ ರೇಸಿನಲ್ಲಿ ಉಳಿದಿರುವುದು ದೇಶದ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ. ‘ಹೋಮ್‌ಬೌಂಡ್’ ಸಿನಿಮಾ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧೆ ನಡೆಸುತ್ತಿದ್ದು, ಈಗ ಒಂದು ಹಂತ ಮುಂದೆ ಸಾಗಿದೆ.RAB Men's Microlight Alpine Down Jacket
ಕರಣ್ ಜೋಹರ್ ನಿರ್ಮಾಣ ಮಾಡಿರುವ ಈ ಸಿನಿಮಾ ಧರ್ಮ, ಜಾತಿ ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಂತಹ ಗಂಭೀರ ವಿಷಯಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಇಶಾನ್ ಖಟ್ಟರ್, ಜಾನ್ಹವಿ ಕಪೂರ್ ಮತ್ತು ವಿಶಾಲ್ ಜೇಟ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ನೀರಜ್ ಗಯ್ವಾನ್ ನಿರ್ದೇಶನ ಮಾಡಿದ್ದಾರೆ.
ಇದುವರೆಗೆ ಭಾರತದ ಕೇವಲ ಐದು ಸಿನಿಮಾಗಳು ಮಾತ್ರ ಆಸ್ಕರ್ಸ್‌ನ ವಿದೇಶಿ ಸಿನಿಮಾ ವಿಭಾಗದ ಶಾರ್ಟ್ ಲಿಸ್ಟ್‌ಗೆ ಸೇರಿವೆ. ಆ ಪಟ್ಟಿಯಲ್ಲಿ ಈಗ ‘ಹೋಮ್‌ಬೌಂಡ್’ ಕೂಡ ಸೇರಿರುವುದು ವಿಶೇಷ. ನಾಮಿನೇಷನ್ ಪಟ್ಟಿಯನ್ನು ಜನವರಿ 22 ರಂದು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ‘ಹೋಮ್‌ಬೌಂಡ್’ ನಾಮಿನೇಷನ್ ಪಡೆಯುವುದಾದರೆ, ಅದು ಭಾರತೀಯ ಚಿತ್ರರಂಗಕ್ಕೆ ದೊಡ್ಡ ಸಾಧನೆಯಾಗಲಿದೆ. ಈ ಹಿಂದೆ ‘ಲಗಾನ್’ ಸಿನಿಮಾ ಮಾತ್ರವೇ ಈ ವಿಭಾಗದಲ್ಲಿ ನಾಮಿನೇಷನ್ ಪಡೆದಿತ್ತು.ಇದನ್ನು ಓದಿ:ಗ್ಲಾಮರ್ ಮತ್ತು ಗಂಭೀರತೆ ಸಂಯೋಜನೆ – ‘ಟಾಕ್ಸಿಕ್’ನಲ್ಲಿ ರುಕ್ಮಿಣಿ ವಸಂತ್ ಪಾತ್ರದ ಫಸ್ಟ್ ಲುಕ್ ಔಟ್
ಆದರೆ ‘ಹೋಮ್‌ಬೌಂಡ್’ಗೆ ಸ್ಪರ್ಧೆ ಸುಲಭವಲ್ಲ. ಇರಾಕ್‌ನ ‘ದಿ ಪ್ರೆಸಿಡೆಂಟ್ ಕೇಕ್’, ಪ್ಯಾಲೆಸ್ತೈನ್‌ನ ‘ಪ್ಯಾಲೆಸ್ತೈನ್ 36’ ಮತ್ತು ದಕ್ಷಿಣ ಕೊರಿಯಾದ ‘ನೋ ಅದರ್ ಚಾಯ್ಸ್’ ಸಿನಿಮಾಗಳು ಬಲವಾದ ಸ್ಪರ್ಧೆ ನೀಡುತ್ತಿವೆ. ಆಸ್ಕರ್ಸ್‌ನ ಅಂತಿಮ ಹಂತ ತಲುಪಲು ಭಾರೀ ಪ್ರಚಾರ ಮತ್ತು ಹೆಚ್ಚಿನ ವೆಚ್ಚವೂ ಅಗತ್ಯವಾಗುತ್ತದೆ.
ಪ್ರಚಾರದ ಸವಾಲುಗಳ ನಡುವೆಯೂ ‘ಹೋಮ್‌ಬೌಂಡ್’ ತಂಡ ನಿರಾಳವಾಗಿಯೇ ಕಾಣಿಸಿಕೊಂಡಿದೆ. ಜನವರಿ 22ರಂದು ನಾಮಿನೇಷನ್ ಘೋಷಣೆಯಾಗಲಿದ್ದು, ಆ ದಿನ ‘ಹೋಮ್‌ಬೌಂಡ್’ ಅಂತಿಮ ಪಟ್ಟಿಗೆ ಆಯ್ಕೆಯಾಗುತ್ತದೆಯೇ ಎಂಬುದು ತಿಳಿಯಲಿದೆ.