ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು 77ನೇ ಗಣರಾಜ್ಯೋತ್ಸವದಲ್ಲಿ ಯಥಾವತ್ತಾಗಿ ಸರ್ಕಾರವು ಸಿದ್ದಪಡಿಸಿದ ಭಾಷಣವನ್ನು ಓದಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣವನ್ನು ನೆರವೇರಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಭಿನ್ನಹಕ್ಕೆ ತೆರೆ ಎಳೆದಿದ್ದಾರೆ ಎನ್ನಲಾಗಿದೆ.
ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಇಂದು ಸಾವಿರಾರು ವರ್ಷಗಳಿಂದ ಆಡಳಿತಕ್ಕೊಳಪಟ್ಟಿದ್ದ ರಾಜಪ್ರಭುತ್ವದಿಂದ ಜನಪ್ರಭುತ್ವವನ್ನು ಪ್ರತಿಷ್ಠಾಪಿಸಿದ ದಿನ. ತಾರತಮ್ಯವನ್ನು ಆಧರಿಸಿದ್ದ ಪುರಾತನ ಕಾನೂನು ಹಾಗೂ ಆಳ್ವಿಕೆಯನ್ನು ಕಿತ್ತೆಸೆದು, ಸಂವಿಧಾನವನ್ನು ಜಾರಿಗೊಳಿಸಿದ ದಿನ.
ನ್ಯಾಯ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹಿರಿಯನ್ನು ಸ್ಮರಿಸಿಕೊಳ್ಳೋಣ. ನವಭಾರತದ ಪರಿಕಲ್ಪನೆಯ ಸಂವಿಧಾನದಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯವೆನ್ನುವ ಮೂರು ಮಾದರಿಗಳನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ವ್ಯಾಖ್ಯಾನಿಸಿದ್ದಾರೆ. ಇದು ಸಾಮಾಜಿಕ ಪ್ರಜಾಪ್ರಭುತ್ವದ ಸಿದ್ದಾಂತವನ್ನು ಗುರುತುಮಾಡುತ್ತದೆ.
ಕರ್ನಾಟಕ ಸರ್ಕಾರವು ಸಂವಿಧಾನವು ಪ್ರಸ್ತಾಪಿಸಿರುವ ಸಮಾನತೆ, ಭ್ರಾತೃತ್ವ ಹಾಗೂ ಸ್ವಾತಂತ್ರ್ಯವನ್ನು ಪರಿಗಣಿಸಿದೆ. ನಮ್ಮ ದೇಶವನ್ನು ಹಾಗೂ ರಾಜ್ಯವನ್ನು ನಿರ್ಮಿಸಲು ಸಂವಿಧಾನವನ್ನು ಬಳಸಿಕೊಂಡು ಮುನ್ನಡೆಯೋಣ. ಮಾದರಿ ಗಣತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸೋಣ ಎಂದು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಯಪಡಿಸಿದ್ದಾರೆ.
ಒಂದೇ ವೇದಿಕೆಯಲ್ಲಿ ಸಿಎಂ, ಡಿಸಿಎಂ ಹಾಗೂ ರಾಜ್ಯಪಾಲರು
ಇತ್ತೀಚೆಗೆ, ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ಸಂಪೂರ್ಣ ಭಾಷಣ ಓದದೇ ಹೊರ ನಡೆದಿದ್ದ ವಿವಾದದ ಸುದ್ದಿಯಾಗಿತ್ತು. ಇಂದಿನ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ರಾಜ್ಯದ ಗಣ್ಯರು ರಾಜಕೀಯ ನಾಯಕರು ಒಟ್ಟಾಗಿ ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪರಸ್ಪರ ಕೈ ಮಿಲಾಯಿಸಿಕೊಂಡರು. ಇದನ್ನೂ ಓದಿ: 77 ನೇ ಗಣರಾಜ್ಯೋತ್ಸವ ಪಥಸಂಚಲನ - ಕರ್ತವ್ಯಪಥದಲ್ಲಿ ಮೊಳಗಲಿದೆ ರಾಷ್ಟ್ರನಮನ