ಭಾರತದ ಈಶಾನ್ಯ ಭಾಗದ ಪ್ರಮುಖ ರಾಜ್ಯವೆನಿಕೊಂಡಿರುವ ಪ್ರವಾಸೀ ಗಮ್ಯತಾಣವಾದ ಮಣಿಪುರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಯಮ್ನಮ್ ಖೇಮ್‌ಚಂದ್ ಸಿಂಗ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು, ಉಪಮುಖ್ಯಮಂತ್ರಿಯಾಗಿ ಕುಕಿ ಸಮುದಾಯದ ಮಹಿಳೆ ನೆಮ್ಚಾ ಕಿಪ್ಗೆನ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಮೂಲಕ ಹಿಂಸಾಚಾರ ಪೀಡಿತ ಪ್ರದೇಶವಾದ ಈ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಆಡಳಿತಕ್ಕೆ ಬಂದಿದೆ. ರಾಜಕೀಯ ಅಸ್ಥಿರತೆ ಹಾಗೂ ಜನಾಂಗೀಯ ಸಂಘರ್ಷದ ಹಿನ್ನಲೆ ಅಂದಿನ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ವರ್ಷ ಫೆಬ್ರವರಿ ಯಿಂದ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು. ಮೊದಲ ಆರು ತಿಂಗಳ ಅವಧಿ ಮುಗಿದ ನಂತರ, ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರವು ಫೆಬ್ರವರಿ 2026 ಕ್ಕೆ ವಿಸ್ತರಣೆ ಮಾಡಿತ್ತು.
ಕಳೆದ ಒಂದು ವರ್ಷದಿಂದ ಜಾರಿಯಲ್ಲಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆದು, ಸಿಂಗ್‌ಜಮೇ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿಂಗ್ ಅವರು, ಮೈತೇಯಿ ಸಮುದಾಯಕ್ಕೆ ಸೇರಿದ್ದಾರೆ. ಅವರನ್ನು ಲಿಬರಲ್ ನಾಯಕ, ಸೌಮ್ಯವಾದಿ ಹಾಗೂ ಅವರ ಶಾಂತಿ ಸಂಧಾನ ತತ್ವ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಅವರನ್ನು ಆರಿಸಿದೆ ಎನ್ನಲಾಗಿದೆ.
ಇನ್ನೂ ಮೊದಲ ಬಾರಿಗೆ ಕುಕಿ ಸಮುದಾಯದ ಮಹಿಳೆ ಉಪಮುಖ್ಯಮಂತ್ರಿ ಹುದ್ದೆಗೇರುವ ದಾಖಲೆಯನ್ನು ನೆಮ್ಚಾ ಕಿಪ್ಗೆನ್ ಮಾಡಿದ್ದಾರೆ. ಇವರು ಕಾಂಗ್‌ಪೋಕ್ಪಿ (Kangpokpi) ಕ್ಷೇತ್ರದ ಶಾಸಕಿಯಾಗಿದ್ದಾರೆ.
ಪ್ರಸ್ತುತ ಈ ಒಂದು ವರ್ಷದ ಅವಧಿ ಮುಗಿಯುವ (ಅಂದರೆ ಫೆಬ್ರವರಿ 13, 2026 ರವರೆಗೆ) ಕೆಲವೇ ದಿನಗಳು ಬಾಕಿಯಿರುವಾಗ ಈ ಜನಪ್ರತಿನಿಧಿಗಳ ಸರ್ಕಾರವನ್ನು ಸ್ಥಾಪಿಸಲು ಮುಂದುವರೆದಿದ್ದು, ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಶಾಸಕಾಂಗದ ನಾಯಕರನ್ನಾಗಿ ಯಮ್ನಮ್ ಖೇಮ್‌ಚಂದ್ ಸಿಂಗ್ ಅವರನ್ನು ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಮಾಡಿದೆ ಎಂದು ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕರ್ನಾಟಕ ಸ್ಥಳೀಯ ಚುನಾವಣೆ 2026 - ಬಳ್ಳಾರಿ ಜಿಲ್ಲೆಯ ಚುನಾವಣಾ ಮಾಹಿತಿ