ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಶಾಲೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮಪಿಶಾಚಿಯನ್ನು ಗುಬ್ಬಿ ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಡೆದಿದ್ದೇನು?
ಕಳೆದ ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ 13 ವರ್ಷದ ಬಾಲಕಿಯೊಬ್ಬಳು ಒಬ್ಬಳೇ ಮನೆಗೆ ತೆರಳುತ್ತಿದ್ದಳು. ಈ ವೇಳೆ ದನಗಳ ವ್ಯಾಪಾರಿಯಾದ ರೇಣುಕ (29) ಎಂಬಾತ ಬಾಲಕಿಯನ್ನು ತಡೆದು ನಿಲ್ಲಿಸಿದ್ದಾನೆ. ತುಮಕೂರು ತಾಲೂಕಿನ ಮಲ್ಲಸಂದ್ರ ಬಳಿಯ ಆದ್ಲಾಪುರ ಗ್ರಾಮದ ನಿವಾಸಿಯಾದ ಈತ, ಬಾಲಕಿಗೆ ಬೇರೊಂದು ಗ್ರಾಮದ ವಿಳಾಸ ಕೇಳುವ ನೆಪ ಮಾಡಿದ್ದಾನೆ.
"ನನಗೆ ಆ ಊರು ಸರಿಯಾಗಿ ಗೊತ್ತಿಲ್ಲ, ಸ್ವಲ್ಪ ದಾರಿ ತೋರಿಸು" ಎಂದು ನಂಬಿಸಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ. ಗುಬ್ಬಿ ತಾಲೂಕಿನ ಗ್ರಾಮವೊಂದರ ಕೆರೆ ಏರಿಯ ಬಳಿ ಯಾರು ಇಲ್ಲದ್ದನ್ನು ಗಮನಿಸಿದ ಈ ಕಿರಾತಕ, ಬಾಲಕಿಯ ಮೇಲೆ ಅಮಾನವೀಯವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಪೊಲೀಸರ ಮಿಂಚಿನ ಕಾರ್ಯಾಚರಣೆ
ಘಟನೆಯ ಬಳಿಕ ಸಂತ್ರಸ್ತ ಬಾಲಕಿ ನೀಡಿದ ಮಾಹಿತಿ ಹಾಗೂ ದೂರಿನ ಅನ್ವಯ ತಕ್ಷಣ ಕಾರ್ಯಪ್ರವೃತ್ತರಾದ ಗುಬ್ಬಿ ಪೊಲೀಸರು, ಆರೋಪಿ ರೇಣುಕನ ಜಾಡು ಹಿಡಿದು ಒಂದೇ ದಿನದಲ್ಲಿ ಆತನನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂತ್ರಸ್ತೆಯ ಸ್ಥಿತಿ
ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.