Skip to main content
ವಿಡಿಯೋ
crime

ಎಕ್ಸಾಮ್ ಭಯಕ್ಕೆ ಜೂನಿಯರ್ ಜೊತೆ ಸೀನಿಯರ್ ವಿದ್ಯಾರ್ಥಿನಿ ನಾಪತ್ತೆ; ಪೊಲೀಸರಿಗೇ ಸವಾಲಾದ ಕೇಸ್!

By Bhavana Gowda
ಎಕ್ಸಾಮ್ ಭಯಕ್ಕೆ ಜೂನಿಯರ್ ಜೊತೆ ಸೀನಿಯರ್ ವಿದ್ಯಾರ್ಥಿನಿ ನಾಪತ್ತೆ; ಪೊಲೀಸರಿಗೇ ಸವಾಲಾದ ಕೇಸ್!

ತಮ್ಮ ಮಕ್ಕಳಿಗಾಗಿ ಪೋಷಕರು ಹಗಲಿರುಳು ಕಣ್ಣೀರು ಹಾಕುತ್ತಿದ್ದು, ಸಾರ್ವಜನಿಕರು ಈ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

ಬೆಂಗಳೂರು: ಪರೀಕ್ಷೆಯ ಭಯ ಏನೆಲ್ಲಾ ಮಾಡಿಸುತ್ತದೆ ಎಂಬುದಕ್ಕೆ ಬೆಂಗಳೂರಿನ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಜೂನಿಯರ್ ವಿದ್ಯಾರ್ಥಿನಿಯನ್ನು ಕರೆದುಕೊಂಡು ನಾಪತ್ತೆಯಾಗಿದ್ದು, ಕಳೆದ ಒಂದು ತಿಂಗಳಿನಿಂದ ಪೊಲೀಸರು ಹಾಗೂ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಘಟನೆಯ ಹಿನ್ನೆಲೆ: ಪರೀಕ್ಷೆ ತಪ್ಪಿಸಲು ಪರಾರಿ?

ವಿದ್ಯಾರಣ್ಯಪುರ ವ್ಯಾಪ್ತಿಯ ತನಿಷ್ಕಾ (2nd PUC) ಮತ್ತು ತೇಜಸ್ವಿನಿ (1st PUC) ಕಳೆದ ಜನವರಿ 31 ರಿಂದ ಕಾಣೆಯಾದ ವಿದ್ಯಾರ್ಥಿನಿಯರು. ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ಇಬ್ಬರೂ ಅಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗ್ ಹಿಡಿದು ಮನೆಯಿಂದ ಹೊರಬಂದಿದ್ದಾರೆ. ವಿಶೇಷವೆಂದರೆ, ಪತ್ತೆ ಹಚ್ಚಬಾರದೆಂಬ ಕಾರಣಕ್ಕೆ ಇಬ್ಬರೂ ತಮ್ಮ ಮೊಬೈಲ್ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣಕಾಸಿನ ಸೌಲಭ್ಯವನ್ನೂ ಇವರು ಒಯ್ದಿಲ್ಲ.

ಹಳೆಯ ಇತಿಹಾಸ ಮತ್ತು ಪೊಲೀಸರ ಶಂಕೆ

ನಾಪತ್ತೆಯಾಗಿರುವ ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕಳೆದ ವರ್ಷವೂ ಪರೀಕ್ಷೆ ತಪ್ಪಿಸಿಕೊಳ್ಳಲು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಈ ವರ್ಷವೂ ಪರೀಕ್ಷೆಯ ಭಯದಿಂದಲೇ ಇಬ್ಬರೂ ನಾಪತ್ತೆಯಾಗಿರಬಹುದು ಎಂದು ಶಂಕಿಸಲಾಗಿದೆ. ಇವರು ಉಚಿತ ಬಸ್ ಸೌಲಭ್ಯವನ್ನು ಬಳಸಿಕೊಂಡು ರಾಜ್ಯದ ವಿವಿಧೆಡೆ ಸಂಚರಿಸುತ್ತಿರುವ ಸಾಧ್ಯತೆ ಇದೆ.

ಮಹದೇಶ್ವರ ಬೆಟ್ಟದಿಂದ ಬಂದಿದ್ದ ಕರೆ!

ಕೆಲ ದಿನಗಳ ಹಿಂದೆ ಇಬ್ಬರೂ ವಿದ್ಯಾರ್ಥಿನಿಯರು ತಮ್ಮ ಸ್ನೇಹಿತರಿಗೆ ಕರೆ ಮಾಡಿ, ತಾವು ಮಹದೇಶ್ವರ ಬೆಟ್ಟದಲ್ಲಿ ಇರುವುದಾಗಿ ತಿಳಿಸಿದ್ದರು. "ಇನ್ನೊಂದು ವಾರದಲ್ಲಿ ಮರಳಿ ಕರೆ ಮಾಡುತ್ತೇವೆ" ಎಂದು ಹೇಳಿದ್ದ ಯುವತಿಯರು, ಆನಂತರ ಇದುವರೆಗೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಪೊಲೀಸರು ಈಗಾಗಲೇ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ಹೈಕೋರ್ಟ್ ಮೆಟ್ಟಿಲೇರಿದ ಕುಟುಂಬ: ಒಂದು ವಾರದ ಗಡುವು

ಮಕ್ಕಳು ಕಾಣೆಯಾಗಿ ತಿಂಗಳಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕಂಗಾಲಾದ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ (Habeas Corpus) ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ವಿದ್ಯಾರ್ಥಿನಿಯರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಒಂದು ವಾರದ ಕಾಲಾವಕಾಶ ನೀಡಿದೆ. ತಮ್ಮ ಮಕ್ಕಳಿಗಾಗಿ ಪೋಷಕರು ಹಗಲಿರುಳು ಕಣ್ಣೀರು ಹಾಕುತ್ತಿದ್ದು, ಸಾರ್ವಜನಿಕರು ಈ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.