Skip to main content
ವಿಡಿಯೋ
1/3
general

KIADB ಭ್ರಷ್ಟಾಚಾರ: 13 ಕೋಟಿ ಹಗರಣ ಬಯಲು - ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಭೀತಿ!?

By Shravanthi R
KIADB ಭ್ರಷ್ಟಾಚಾರ: 13 ಕೋಟಿ ಹಗರಣ ಬಯಲು - ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಭೀತಿ!?

ರೈತರಿಗೆ ನೀಡಬೇಕಾದ ಪರಿಹಾರವನ್ನು ನಕಲಿ ದಾಖಲೆಗಳಿಂದ ಮೂರನೇ ವ್ಯಕ್ತಿಗೆ 13 ಕೋಟಿ ಬಿಡುಗಡೆ ಮಾಡಿದ ಅಕ್ರಮ ಬೆಳಕಿಗೆ ಬಂದಿದೆ. ಪ್ರಮುಖ KIADB ಅಧಿಕಾರಿಗಳು ಮತ್ತು ದಲ್ಲಾಳಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು, ಶೀಘ್ರದಲ್ಲೇ ದಾಳಿ ಸಾಧ್ಯತೆ.

ಮಹಾತ್ಮ ಗಾಂಧೀಜಿಯವರ ಆಶಯದಂತೆ ಕೈಗಾರಿಕೆಗಳಿಂದ ಗ್ರಾಮೋಭ್ಯುದಯ ಹಾಗೂ ಅಭಿವೃದ್ಧಿಗಾಗಿ ಸ್ಥಾಪನೆಯಾದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB), ಇದೀಗ ಭ್ರಷ್ಟಾಚಾರ ಮತ್ತು ಹಗರಣಗಳ ಸುಳಿಯಲ್ಲಿ ಸಿಲುಕಿದೆ. ರೈತರಿಗೆ ಪರಿಹಾರ ನೀಡಿ ಕೈಗಾರಿಕೆಗಳಿಗೆ ಜಾಗ ಒದಗಿಸಬೇಕಿದ್ದ ಈ ಸಂಸ್ಥೆಯ ಕಾರ್ಯವೈಖರಿ ಸಂಪೂರ್ಣವಾಗಿ ಹಾದಿ ತಪ್ಪಿದೆ ಎಂಬ ಆರೋಪ ಕೇಳಿಬಂದಿದೆ.

ಹಣ ಬಿಡುಗಡೆಗೆ ಲಂಚದ ಮೊರೆ: ಕೆಐಎಡಿಬಿ ಕಚೇರಿಯಲ್ಲಿ ಎಲ್ಲರಿಗೂ ಗೊತ್ತು!

KIADB ಯಲ್ಲಿ ರೈತರಿಗೆ ಪರಿಹಾರದ ಹಣ ಬಿಡುಗಡೆಯಾಗಬೇಕಾದರೆ ಪ್ರತಿ ಹಂತದಲ್ಲೂ ಲಂಚ ನೀಡಲೇಬೇಕು. ಈ ಲಂಚದ ದಂಧೆ ಆ ಕಚೇರಿಯಲ್ಲಿ ಕಸ ಗುಡಿಸುವ ನೌಕರನಿಗೂ ತಿಳಿದಿರುವಂತಹ ವಿಷಯವೆನ್ನುವುದು ಬೇಸರದ ಸಂಗತಿಯಾಗಿದೆ. ಕಳೆದ ಕೆಲ ದಿನಗಳಿಂದ KIADB ಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಒಂದೆರಡಲ್ಲ, ಡಬಲ್ ಪೇಮೆಂಟ್, ಸತ್ತವರ ಹೆಸರಿನಲ್ಲಿ ಹಾಗೂ ಇಲ್ಲದ ಕಂಪನಿಗೆ ಹಣ ಮಂಜೂರು, ಸರ್ಕಾರಿ ಜಮೀನಿಗೂ ಪರಿಹಾರ ವಿತರಣೆ ಇಂತಹ ಹಲವಾರು ಪ್ರಕರಣಗಳು ಈಗಾಗಲೇ ತನಿಖೆಯ ಹಂತದಲ್ಲಿವೆ. ಹಲವು ಪ್ರಮುಖ ಪ್ರಕರಣಗಳು ಜಾರಿ ನಿರ್ದೇಶನಾಲಯದ (ED) ಕಛೇರಿಯಲ್ಲಿ ತೀವ್ರ ತನಿಖೆ ಎದುರಿಸುತ್ತಿವೆ ಎನ್ನಲಾಗಿದೆ.

ಹೊಸ ಹಗರಣ ಬಯಲು: ಸ್ವಾಧೀನವಿಲ್ಲದವರಿಗೆ 13 ಕೋಟಿ ಪರಿಹಾರ!

ಈ ಎಲ್ಲಾ ಹಗರಣಗಳ ನಡುವೆಯೇ ಮತ್ತೊಂದು ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. ನ್ಯಾಯಾಲಯದ ಆದೇಶದಲ್ಲಿ ಸ್ವಾಧೀನದಲ್ಲಿರುವ ವ್ಯಕ್ತಿಗಳಿಗೆ ಪರಿಹಾರ ನೀಡಬೇಕಿದ್ದರೂ, KIADB ಅಧಿಕಾರಿಗಳು ಸ್ವಾಧೀನದಲ್ಲಿಲ್ಲದ ಮೂರನೇ ವ್ಯಕ್ತಿಗಳಿಗೆ, 1000 ಚ ಮೀಟರ್ ಜಾಗಕ್ಕೆ ಪರಿಹಾರ ಬರೋಬ್ಬರಿ ₹13 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ನಿದರ್ಶನವೆಂಬಂತೆ, ಮಾರುತಿ ಸೇವಾನಗರದ ಸರ್ವೆ ಪ್ರದೇಶದಲ್ಲಿ ಲಕ್ಷ್ಮಿನಾರಾಯಣ್ ಅವರೇ ಸ್ವಾಧೀನದಲ್ಲಿದ್ದಾರೆ ಎಂದು ಬಿಬಿಎಂಪಿ ಮತ್ತು ಹೈಕೋರ್ಟ್ ಆದೇಶ ನೀಡಿದ್ದವು. ಹೀಗಿದ್ದರೂ, KIADB ಅಧಿಕಾರಿಗಳು ಈ ಆದೇಶಗಳನ್ನು ಕಡೆಗಣಿಸಿ, ನಕಲಿ ದಾಖಲೆ ಸೃಷ್ಟಿಸಿದ್ದ ನಾರಾಯಣಸ್ವಾಮಿ ಎಂಬ ಮೂರನೇ ವ್ಯಕ್ತಿಗೆ ಪರಿಹಾರದ ಹಣ ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಅರ್ಧ ಗಂಟೆಯಲ್ಲಿ ಹಣ ಮಾಯ - ಕೋಟ್ಯಾಂತರ ರೂ. 'RTGS' ಮೂಲಕ ವರ್ಗಾವಣೆ!

ಸರ್ಕಾರದ ಈ ಬೃಹತ್ ಹಣ ಬಿಡುಗಡೆಯ ಹಿಂದೆ ಇಡೀ KIADB ಅಧಿಕಾರಿಗಳ ತಂಡವೇ ಸಂಚು ರೂಪಿಸಿದೆ ಎಂಬುದು ಹಲವು ಪುರಾವೆಗಳಿಂದ ಸ್ಪಷ್ಟವಾಗುತ್ತಿದೆ. SBI ಖಾತೆಗೆ ಹಣ ಜಮೆಯಾದ ಕೆಲವೇ ಕ್ಷಣಗಳಲ್ಲಿ, ಅಧಿಕಾರಿಗಳ ದಲ್ಲಾಳಿಗಳು (Brokers) ತರಾತುರಿಯಲ್ಲಿ RTGS ಮೂಲಕ ಅದೇ ದಿನ ನಾಲ್ಕು ಹಂತಗಳಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಬೇರೆ ಬ್ಯಾಂಕ್‌ಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ಅಕ್ರಮಗಳ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಹಲವು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ. Trading Harmonic Patterns With Technical Analysis (English) Book Paperback – 1 January 2020

ಯಾರ್ ಯಾರ ಬುಡಕ್ಕೆ ಬರಲಿದೆ KIADB ಭ್ರಷ್ಟಾಚಾರದ ಬಾಂಬ್?

ಈ ಹಗರಣಗಳಿಗೆ ಸಂಬಂಧಿಸಿದಂತೆ, ಪ್ರಧಾನ ಕಾರ್ಯದರ್ಶಿ, KIADB CEO ಮಹೇಶ್, ವಿಶೇಷ ಭೂ ಸ್ವಾಧೀನಾಧಿಕಾರಿ ತೇಜಸ್ ಕುಮಾರ್, ಅಜಿತ್ ರೈ, ಮಾರುತಿ ಪ್ರಸನ್ನ ಮ್ಯಾನೇಜರ್ ಸೇರಿದಂತೆ ಹಲವು ದಲ್ಲಾಳಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ ಎನ್ನಲಾಗಿದೆ. ಇದೀಗ KAS ಅಧಿಕಾರಿ ತೇಜಸ್ ಕುಮಾರ್ ಹಾಗೂ ಸಹ ಅಧಿಕಾರಿಗಳ ವಿರುದ್ಧ 17A ಅಡಿಯಲ್ಲಿ ತನಿಖೆಗೆ ಅನುಮತಿ ದೊರೆತಿದ್ದು, ಸರ್ಕಾರದ ಹಣ ಹೀಗೆ ಸಿಕ್ಕ ಸಿಕ್ಕವರ ಅಕೌಂಟಿಗೆ ಹೋಗಿದೆ ಅನ್ನುವುದಕ್ಕೆ ಹಲವು ಲಿಖಿತ ಸಾಕ್ಷಿಗಳು ದೊರೆತಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಕಾಯ್ದೆ ಅಡಿ ದೂರು ದಾಖಲಿಸಿದ್ದು, ಯಾವುದೇ ಸಮಯದಲ್ಲಿ KIADB ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಯುವ ಸಾಧ್ಯತೆ ಇದೆ.

ಈ ಹಿಂದೆ ಡಬಲ್ ಪೆಮೆಂಟ್ ಪ್ರಕರಣದಲ್ಲಿ ಈಡಿ ಅಧಿಕಾರಿಗಳ ಧಾಳಿ ವೇಳೆ ಹಲವು ದಿನಗಳ ಕಾಲ ವಿಶೇಷ ಭೂ ಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ ಕರ್ತವ್ಯಕ್ಕೆ ಬಾರದೇ ತಲೆಮರೆಸಿಕೊಂಡಿದ್ದ ಇತಿಹಾಸ ಕೂಡ ಕೆಐಎಡಿಬಿ ಅಧಿಕಾರಿಗಳ ಮೇಲಿದೆ. ಇದೀಗ ಈ ದಾಳಿಯಿಂದ ಮತ್ತಷ್ಟು ಅಧಿಕಾರಿಗಳ ಪಾತ್ರ ಬಯಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರ - ಚುನಾವಣೆ ಸಮೀಪಿಸಿತ್ತಿರುವ ನಡುವೆ ರಕ್ತಪಾತ - ಜನ ಸುರಾಜ್‌ ಪಕ್ಷದ ವ್ಯಕ್ತಿ ಹ**ತ್ಯೆ!

ಒಂದು ಎಕರೆಗೆ ಇಂತಿಷ್ಟು ಪರ್ಸೆಂಟೇಜ್ ಫಿಕ್ಸಾ?!

ಈ ಮಧ್ಯೆ ಪರಿಹಾರದ ಹಣ ಬಿಡುಗಡೆಗೆ ಖುದ್ದು ಕೆಐಎಡಿಬಿ ಸಿಇಒ ಮಹೇಶ್, ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ ಎಂಬ ಷರಾ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಸಿಇಒ ಹಾಗೂ ವಿಶೇಷ ಡಿಸಿ ನಿಯಾಮಾನುಸಾರ ಎಂಬ ಷರ ಬರೆಯುವುದು ಎಲ್ಲಾ ಪ್ರಕ್ರಿಯೆಗಳಲ್ಲಿ ಸಹಜವಾದ ಪ್ರಕ್ರಿಯೆ. ಆದರೆ, ಪರಿಹಾರ ಬಿಡುಗಡೆಗೆ ಖುದ್ದು ಹಿರಿಯ ಅಧಿಕಾರಿಗಳೆ ಬೆಂಬಲ ನೀಡಿರುವುದು ಅಕ್ರಮ ಹಣ ವರ್ಗಾವಣೆ ಹಿಂದೆ ಬೃಹತ್ ಜಾಲವಿರುವ ಬಗ್ಗೆ ಅನುಮಾನ ಮೂಡಿಸಿದೆ.‌ ಇದೇ ಅಧಿಕಾರಿಗಳು ನೂರಾರು ಎಕರೆ ಸರ್ಕಾರಿ ಗೋಮಾಳ ಹಾಗೂ ಸ್ಮಶಾನಗಳಿಗೂ ಅಕ್ರಮವಾಗಿ ಅನಧಿಕೃತ ವ್ಯಕ್ತಿಗಳಿಗೆ ಪರಿಹಾರ ನೀಡಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿದೆ. ಮುಂದಿನ ದಿನಗಳಲ್ಲಿ ಮತ್ಯಾವ್ಯಾವ ಅಧಿಕಾರಿಗಳಿಗೆ ಬಿಸಿ ತಟ್ಟಲಿದೆ ಹಾಗೇ ಇದೀಗ ಈ ಪ್ರಕರಣದಿಂದ ಮತ್ತಷ್ಟು ಅಧಿಕಾರಿಗಳ ಪಾತ್ರ ಬಯಲಾಗುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ: ತೆಲಂಗಾಣ - ರೆಡ್ಡಿ ಸಂಪುಟದ ಮೊದಲ ಮುಸ್ಲಿಂ ಸಚಿವರಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌