Skip to main content
ವಿಡಿಯೋ
1/2
general

ಗಗನಯಾನ ಆರಂಭಕ್ಕೆ ವಿಳಂಬ: ಮಾನವರಹಿತ ಮೊದಲ ಮಿಷನ್ 2026ರ ಜನವರಿಯಿಂದ ಆರಂಭ - ಇಸ್ರೋ

By Vinutha U
ಗಗನಯಾನ ಆರಂಭಕ್ಕೆ ವಿಳಂಬ: ಮಾನವರಹಿತ ಮೊದಲ ಮಿಷನ್ 2026ರ ಜನವರಿಯಿಂದ ಆರಂಭ - ಇಸ್ರೋ

ಗಗನಯಾನ ಮಿಷನ್‌ನ ಭಾಗವಾಗಿ ಈಗಾಗಲೇ 8,000ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದ್ದು, ಗಗನನೌಕೆಗೆ ಬೇಕಾದ ಎಲ್ಲಾ ಹಾರ್ಡ್‌ವೇರ್ ಭಾಗಗಳು ಸತೀಶ್ ಧವನ್ ಸ್ಪೇಸ್ ಸೆಂಟರ್‌ನಲ್ಲಿ ತಲುಪಿವೆ. ಅವುಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ.

ನವದೆಹಲಿ, ನವೆಂಬರ್ 6: ಭಾರತದ ಬಹುನಿರೀಕ್ಷಿತ ಮಾನವ ಸಹಿತ ಗಗನಯಾನ ಯೋಜನೆಗೆ ಮುನ್ನ ಕೈಗೊಳ್ಳಬೇಕಿದ್ದ ಮಾನವರಹಿತ ಸ್ಪೇಸ್ ಮಿಷನ್ಗಳ ಆರಂಭದಲ್ಲಿ ಸ್ವಲ್ಪ ವಿಳಂಬವಾಗಲಿದೆ ಎಂದು ಇಸ್ರೋ (ISRO) ದೃಢಪಡಿಸಿದೆ. ವರ್ಷದೊಳಗೆ ಚಾಲನೆಗೊಳ್ಳಬೇಕಿದ್ದ ಮೊದಲ ಮಾನವರಹಿತ ಮಿಷನ್, ತಡವಾಗಿ 2026 ಜನವರಿಯಲ್ಲಿ ಉಡಾವಣೆಯಾಗುವ ಸಾಧ್ಯತೆಯಿದೆ.

ಇತ್ತೀಚೆಗೆ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ನೀಡಿದ ಮಾಹಿತಿಯ ಪ್ರಕಾರ, 2027ಕ್ಕೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಮುಖ ಗುರಿ ಹಾಗೆಯೇ ಇದ್ದು, ಅದರ ಪೂರ್ವಭಾವಿಯಾಗಿ ಒಟ್ಟು ಮೂರು ಮಾನವರಹಿತ ಮಿಷನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗುತ್ತದೆ.

ಮೊದಲು ಡಿಸೆಂಬರ್ನಲ್ಲಿ ಆರಂಭವಾಗಬೇಕಿದ್ದ ಮೊದಲ ಮಾನವರಹಿತ ಮಿಷನ್ G1 ಈಗ 2026 ಜನವರಿಗೆ ಮುಂದೂಡಿಕೆಯಾಗಿದೆ. ಮಿಷನ್ ಮಾರ್ಚ್ ಅಥವಾ ಏಪ್ರಿಲ್ ತನಕ ನಡೆಯಲಿದೆ. ಇದರ ನಂತರ G2 ಮತ್ತು G3 ಮಿಷನ್ಗಳು ನಡೆಯಲಿವೆ. ಮಾನವಸಹಿತ ಮಿಷನ್ಗೆ ಮುನ್ನದ ಮೂರೂ ಪ್ರಯೋಗಗಳಲ್ಲಿ 'ವ್ಯೋಮಿತ್ರ' ಎಂಬ ಮಾನವ ರೂಪದ ರೋಬೋವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. https://amzn.in/d/ihg5ixS

ಬಾಹ್ಯಾಕಾಶದಲ್ಲಿ ಮನುಷ್ಯನಿಗೆ ಎದುರಾಗಬಹುದಾದ ಕಷ್ಟ-ನಷ್ಟಗಳನ್ನು ತಿಳಿದುಕೊಳ್ಳಲು ಮತ್ತು ಪ್ರಯೋಗಗಳ ಮೂಲಕ ಮಾನವ ಸಹಿತ ಪ್ರಯಾಣವು ನೂರಕ್ಕೆ ನೂರು ಸುರಕ್ಷಿತ ಎಂದು ಖಚಿತಪಡಿಸಿಕೊಳ್ಳಲು ವ್ಯೋಮಿತ್ರ ನೆರವಾಗಲಿದೆ. ಗಗನಯಾನ ಮಿಷನ್ ಭಾಗವಾಗಿ ಈಗಾಗಲೇ 8,000ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದ್ದು, ಗಗನನೌಕೆಗೆ ಬೇಕಾದ ಎಲ್ಲಾ ಹಾರ್ಡ್ವೇರ್ ಭಾಗಗಳು ಸತೀಶ್ ಧವನ್ ಸ್ಪೇಸ್ ಸೆಂಟರ್ನಲ್ಲಿ ತಲುಪಿವೆ. ಅವುಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ.