2026ರ ಹೊಸ ವರ್ಷದ ಮೊದಲ ದಿನದಂದು ಕರಾವಳಿ ತೀರದ ದೇವಸ್ಥಾನಗಳಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣ ಮನೆಮಾಡಿದೆ. ಅದರಲ್ಲೂ ಮಂಗಳೂರಿನ ಸುಪ್ರಸಿದ್ಧ ಮತ್ತು ಐತಿಹಾಸಿಕ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಭಕ್ತರ ದಂಡೇ ಹರಿದುಬಂದಿದ್ದು, ಹೊಸ ವರ್ಷವನ್ನು ದೇವರ ಆಶೀರ್ವಾದದೊಂದಿಗೆ ಬರಮಾಡಿಕೊಳ್ಳುತ್ತಿದ್ದಾರೆ.
ಹೊಸ ವರ್ಷದ ಮೊದಲ ಮುಂಜಾನೆಯೇ ಸಾವಿರಾರು ಭಕ್ತರು ಸಾಲಿನಲ್ಲಿ ನಿಂತು ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದ ಗರ್ಭಗುಡಿ ಹಾಗೂ ಪ್ರಾಂಗಣವನ್ನು ಬಣ್ಣ ಬಣ್ಣದ ಸುಂದರ ಹೂವುಗಳಿಂದ ಮತ್ತು ಆಕರ್ಷಕ ದೀಪಾಲಂಕಾರಗಳಿಂದ ಕಂಗೊಳಿಸುವಂತೆ ಸಜ್ಜುಗೊಳಿಸಲಾಗಿತ್ತು. rytras Women's Cotton A-Line Kurta Set with Palazzo Pants
ಭಕ್ತರ ಸಂಕಲ್ಪ ಈಡೇರಿಕೆಗಾಗಿ ದೇವಸ್ಥಾನದ ವತಿಯಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಆಯೋಜಿಸಲಾಗಿತ್ತು. ಕದ್ರಿ ದೇವಸ್ಥಾನದ ಒಂದು ವಿಶೇಷತೆಯೆಂದರೆ ಅಲ್ಲಿನ ಪ್ರಾಕೃತಿಕ ಜಲಮೂಲಗಳು. ದೇವಸ್ಥಾನದ ಮೇಲ್ಭಾಗದಲ್ಲಿರುವ ಏಳು ಕೆರೆಗಳಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದರು. ಈ ಕೆರೆಗಳಲ್ಲಿ ಸ್ನಾನ ಮಾಡುವುದು ಪುಣ್ಯದ ಕೆಲಸ ಎಂಬ ನಂಬಿಕೆ ಇದೆ.
ನಂತರ 'ಕಲಶ ಸ್ನಾನ' ಮಾಡಿ ಶುಚಿರ್ಭೂತರಾದ ಭಕ್ತರು ಭಕ್ತಿಯಿಂದ ಮಂಜುನಾಥೇಶ್ವರನ ದರ್ಶನ ಪಡೆದು ಪುನೀತರಾದರು.ಕೇವಲ ಮಂಗಳೂರಿನ ಸ್ಥಳೀಯರು ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ದಕ್ಷಿಣ ಕನ್ನಡ ಜಿಲ್ಲೆಗೆ ಲಗ್ಗೆ ಇಟ್ಟಿದ್ದಾರೆ.ಇದನ್ನು ಓದಿ: ಹೊಸ ವರ್ಷ ಸಂಭ್ರಮಾಚರಣೆ: "ನನ್ನ ಬದುಕಿನ ಬೆಳಕು" ಎನ್ನುವ ವಿರಾಟ್ ಕೊಹ್ಲಿ ಪೋಸ್ಟ್ ವೈರಲ್!
ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ರಜೆಯ ಹಿನ್ನೆಲೆಯಲ್ಲಿ ಅನೇಕರು ಕರಾವಳಿಯ ಬೀಚ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿದ್ದರು. ಹೊಸ ವರ್ಷದ ಆರಂಭದ ದಿನವಾದ ಇಂದು ಮುಂಜಾನೆಯೇ ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಕದ್ರಿ, ಕುದ್ರೋಳಿ ಗೋಕರ್ಣನಾಥೇಶ್ವರ ಮತ್ತು ಮಂಗಳಾದೇವಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ದೇವಸ್ಥಾನದ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ತ್ ಮತ್ತು ಮಂಡಳಿಯ ವತಿಯಿಂದ ವ್ಯವಸ್ಥಿತ ಸಾಲುಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರಕೃತಿಯ ಮಡಿಲಿನಲ್ಲಿರುವ ಈ ಐತಿಹಾಸಿಕ ದೇವಾಲಯದಲ್ಲಿ ಪ್ರಾರ್ಥಿಸುವ ಮೂಲಕ ಶಾಂತಿ ಮತ್ತು ಸಮೃದ್ಧಿಯ ವರ್ಷವಾಗಲಿ ಎಂಬ ಹಾರೈಕೆ ಎಲ್ಲರಲ್ಲೂ ಕಂಡುಬಂತು.ಇದನ್ನು ಓದಿ: ಹೊಸ ವರ್ಷ 2026 ಸ್ವಾಗತಕ್ಕೆ ಮಂತ್ರಾಲಯ ತುಂಬಿ ತುಳುಕುತ್ತಿದೆ: ರಾಯರ ಕೃಪೆಗೆ ಭಕ್ತಸಾಗರ..!